ಸಮಗ್ರ ನ್ಯೂಸ್: ಹಲವಾರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಬಹಳ ಮಂದಗತಿಯಲ್ಲಿ ಸಾಗಿರುವ ಸೋಮವಾರಪೇಟೆಯ ಜೂನಿಯರ್ ಕಾಲೇಜು ಶಾಲಾ ಆವರಣದ ಟರ್ಫ್ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಹಳ ಮಂದಗತಿಯಲ್ಲಿ ಸಾಗಿ ಅನೇಕ ಸಮಸ್ಯೆಗಳ ಗೊಂದಲಗಳ ಗೂಡಾಗಿರುವ ಟರ್ಫ್ ಮೈದಾನವನ್ನು ಪರಿಶೀಲಿಸಿದ ಶಾಸಕ ಡಾ.ಮಂತರ್ ಗೌಡ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಮೈದಾನದ ಹಲವೆಡೆ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ಶಾಸಕರು,ಲೋಕಾಯುಕ್ತ ತನಿಖೆ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೈದಾನದ ಪ್ರಗತಿ ಕುಂಠಿತವಾಗಿದೆಯೆಂದು ಟರ್ಫ್ ಅಭಿವೃದ್ಧಿ ಸಮಿತಿ ಸದಸ್ಯರು ಶಾಸಕರಿಗೆ ದೂರು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಂತರ್ ಗೌಡ ಕೂಡಲೇ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು, ಉದ್ಘಾಟನೆ ನೆರವೇರಿಸಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು, ರಾಷ್ಟ್ರಮಟ್ಟದ ಆಟಗಾರರನ್ನು ನೀಡಿರುವ ಸೋಮವಾರಪೇಟೆಗೆ ಒಂದು ಸರಿಯಾದ ಆಟದ ಮೈದಾನ ಇಲ್ಲದೆ ಇರುವುದು ವಿಪರ್ಯಾಸ, ಟರ್ಫ್ ಮೈದಾನ ಅಭಿವೃದ್ಧಿಗೆ ಬೇಕಾದ ಅಗತ್ಯ ಕ್ರಮ ಗಳನ್ನು ಕೂಡಲೇ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈದಾನದ ಸುತ್ತಮುತ್ತ ಇರುವ ಜಾಗದಲ್ಲಿ ಕ್ರೀಡಾಪಟುಗಳಿಗೆ ನೆರವಾಗುವಂತಹ ವಾಲಿಬಾಲ್ ಆಟದ ಮೈದಾನ, ಸ್ಕೇಟಿಂಗ್ ತರಬೇತಿ ಕೇಂದ್ರ ನಿರ್ಮಿಸಲು ಉದ್ದೇಶಿಸಿರುವುದಾಗಿ ಡಾ.ಮಂತರ್ ಗೌಡ ತಿಳಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ ಎಂ ಲೋಕೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ ಬಿ ಸತೀಶ್ ಹಾಗೂ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.