ಸಮಗ್ರ ನ್ಯೂಸ್: ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಯುವಕರು, ಆಸ್ತಿಗಾಗಿ ಮಹಿಳೆಯನ್ನ ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದು ಪರಾರಿಯಾಗಿರುವ ಘಟನೆ ಆನೇಕಲ್ ಉಪವಿಭಾಗದ ಬನ್ನೇರುಘಟ್ಟ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಆರೋಪಿಗಳ ಪೈಕಿ ಇಂದಲ್ ಕುಮಾರ್ (21) ಎಂಬ ವ್ಯಕ್ತಿ ಪೊಲೀಸರ ವಶವಾಗಿದ್ದಾನೆ. ಮೃತ ಮಹಿಳೆಯನ್ನು ಗೀತಾ (54) ಎಂದು ಗುರುತಿಸಲಾಗಿದೆ.
ಜೂನ್ 1ರಂದು ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿ ತನಿಖೆ ಕೈಗೊಂಡಿದ್ದ ಬನ್ನೇರುಘಟ್ಟ ಪೊಲೀಸರು ಹಂತಕರ ಪತ್ತೆಗಾಗಿ ವಿಶೇಷ ತಂಡದ ರಚನೆ ಮಾಡಿತ್ತು. ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಓರ್ವನ ಬಂಧನವಾಗಿದೆ.
ಬಿಹಾರದಿಂದ ಬಂದಿದ್ದ ಯುವಕರು ಕೊಲೆಯಾದ ಮಹಿಳೆ ಗೀತಾ ಮನೆಯಲ್ಲೇ ಬಾಡಿಗೆಗೆ ಇದ್ದು, ಮನೆಯನ್ನು ತಮ್ಮ ಹೆಸರಿಗೇ ಮಾಡಿಕೊಡುವಂತೆ ಆಕೆಯನ್ನ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದೇ ಇದ್ದುದಕ್ಕೆ ಕೊಲೆ ಮಾಡಿದ್ದಾರೆ. ಈ ವಿಚಾರ ಹೊರಗೆ ತಿಳಿಯಬಾರದೆಂದು ಮೃತದೇಹದ ಭಾಗಗಳನ್ನ ತುಂಡು ತುಂಡಾಗಿ ಕತ್ತರಿಸಿ ಅಲ್ಲಲ್ಲಿ ಎಸೆದಿದ್ದಾರೆ. ಕತ್ತರಿಸಿದ ಭಾಗಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿ ಬೇರೆಡೆಗೆ ಸಾಗಿಸಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿದ ನಂತರವೂ ಏನು ಆಗಿಲ್ಲವೆನ್ನುವಂತೆ ಆರೋಪಿಗಳು ಒಂದು ದಿನ ಕೆಲಸಕ್ಕೆ ತೆರಳಿದ್ದರು. ಅವರಲ್ಲಿಬ್ಬರು ಕಿರಾತಕರು ಶವದ ಮುಂದೆಯೇ ಕುಳಿತು ಊಟವನ್ನೂ ಮಾಡುತ್ತಿದ್ದರು. ಕೃತ್ಯ ನಡೆದ ಮೂರು ದಿನಗಳ ಬಳಿಕ ಬೀರುತ್ತಿದ್ದ ದುರ್ವಾಸನೆಗೆ ಆತಂಕಗೊಂಡು ಆರೋಪಿಗಳು ಮನೆಯ ಹಿಂಭಾಗ ದೇಹದ ಭಾಗಗಳನ್ನು ಬಿಸಾಡಿ ಎಸ್ಕೆಪ್ ಆಗಿದ್ದಾರೆ. ಅದರಲ್ಲಿ ಮಹಿಳೆಯ ತಲೆ ಮತ್ತು ಒಂದು ಕೈ 1ಕಿಮೀ ದೂರದಲ್ಲಿ ಪತ್ತೆಯಾದರೆ, ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಅರಣ್ಯ ಪ್ರದೇಶದಲ್ಲಿ ರುಂಡ ಪತ್ತೆಯಾಗಿದೆ.
ಕೃತ್ಯಕ್ಕೂ ಮುನ್ನ ಅತ್ಯಾಚಾರ ಆಗಿರುವ ಕುರಿತು ಪರಿಶೀಲನೆ ನಡೆಯುತ್ತಿದೆ. ಸದ್ಯದಲ್ಲೇ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಮಾಡಲಿದ್ದಾರೆ. ಈ ಕೊಲೆ ಮೇಲ್ನೋಟಕ್ಕೆ ಆಸ್ತಿ ವಿಚಾರಕ್ಕಾಗಿಯೇ ನಡೆದಿರುವುದು ಕಂಡುಬಂದಿದೆ. ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್, ಸುಮೀತ್ ಹಾಗೂ ಇನ್ನೂ ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ ನೀಡಿದ್ದಾರೆ.