ಸಮಗ್ರ ನ್ಯೂಸ್: ಅಮೆಜಾನ್ ಪ್ರಾಂತ್ಯದ ಅರರಾಕುವಾರಾದಿಂದ ಸ್ಯಾನ್ ಜೋಸ್ ಡೆಲ್ ಗುವಿಯಾರ್‌ಗೆ ಮೇ 1ರಂದು ಪ್ರಯಾಣ ಬೆಳೆಸಿದ್ದ ಒಂದೇ ಕುಟುಂಬದ 7 ಮಂದಿ ಮತ್ತು ಒಬ್ಬ ಪೈಲಟ್ ಇದ್ದ ʼಸೆಸ್ನಾ 206ʼ ಸಣ್ಣ ವಿಮಾನವೊಂದು ಎಂಜಿನ್ ವೈಫಲ್ಯಗೊಂಡು ದಟ್ಟ ಕಾಡಿನಲ್ಲಿ ಬಿದ್ದಿತ್ತು. ಈ ಘಟನೆಯಲ್ಲಿ ತಾಯಿ ಮತ್ತು ವಿಮಾನದ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿದ್ದು, ಹೀಗಾಗಿ ಮಕ್ಕಳು ಬದುಕಿರುವ ಸುಳಿವು ಸಿಕ್ಕಿದೆ ಎಂದು ಹುಡುಕಾಟವನ್ನು ತೀವ್ರಗೊಳಿಸಲಾಗಿತ್ತು. ಮಕ್ಕಳನ್ನು ಪತ್ತೆಹಚ್ಚಲು ದಟ್ಟಕಾಡಿನಲ್ಲಿ 150 ಸೈನಿಕರು ಹಗಲು ರಾತ್ರಿ ಕಾರ್ಯ ನಡೆಸಿದ್ದರು.

ನಾಯಿಗಳನ್ನು ಸಹಾಯಕ್ಕೆ ಸೇನೆ ಬಳಸಿಕೊಂಡಿತ್ತು. ಸ್ಥಳೀಯ ಬುಡಕಟ್ಟಿನ ಹತ್ತಾರು ಸ್ವಯಂ ಸೇವಕರೂ ಸಹ ಈ ಕಾರ್ಯಾಚರಣೆಯಲ್ಲಿ ಸಹಾಯ ಹಸ್ತ ನೀಡಿದ್ದರು. ಹಸಿವಿನಿಂದ ಮಕ್ಕಳು ಸಾಯಬಾರದೆಂದು ಆಹಾರ ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕಾಡಿನೊಳಗೆ ಎಸೆಯಲಾಗಿತ್ತು.
ಇದೊಂದು ವಿಸ್ಮಯಕಾರಿ ಘಟನೆಯಾಗಿದ್ದು, 40 ದಿನಗಳ ಹುಡುಕಾಟದ ಬಳಿಕ ಸೇನಾಪಡೆ ಮತ್ತು ಸ್ಥಳೀಯ ಜನರು ಮಕ್ಕಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ದೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಮಕ್ಕಳು ಕಂಡುಹಿಡಿದಿರುವುದನ್ನು ಇತಿಹಾಸ ಎಂದಿಗೂ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಮಕ್ಕಳು ಶಕ್ತಿಹೀನರಾಗಿದ್ದಾರೆ ವೈದೈಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡು ಅವರನ್ನು ರಕ್ಷಿಸಿದೆ ಅವರು ಈಗ ಕೊಲಂಬಿಯಾದ ಮಕ್ಕಳು ಎಂದು ಪೆಟ್ರೋ ಟ್ವಿಟ್ ಮಾಡಿದ್ದಾರೆ.

ಪತನಗೊಂಡ ವಿಮಾನದಲ್ಲಿದ್ದ ಯುಕ್ಕಾ ಹಿಟ್ಟನ್ನು ತಿನ್ನುವ ಮೂಲಕ ಮತ್ತು ಹುಡುಕಾಟ ಹೆಲಿಕಾಪ್ಟರ್‌ಗಳಿಂದ ಬೀಳಿಸಿದ ಪರಿಹಾರ ಪಾರ್ಸೆಲ್‌ಗಳನ್ನು ತಿಂದು ಬದುಕುಳಿದಿದ್ದಾರೆ. ಇದರ ಜೊತೆಗೆ ಅಮೆಜಾನ್ ಪ್ರದೇಶದಲ್ಲಿ ತಮ್ಮ ಕುಟುಂಬದವರು ತಿಳಿಸಿಕೊಟ್ಟಿದ್ದ ತಿನ್ನಬಹುದು ಎಂದು ಗುರುತಿಸಿದ ಬೀಜಗಳು, ಹಣ್ಣುಗಳು, ಬೇರುಗಳು ಮತ್ತು ಸಸ್ಯಗಳನ್ನು ಸಹ ಸೇವಿಸಿದ್ದಾರೆ ಎಂದು ಕೊಲಂಬಿಯಾದ ರಾಷ್ಟ್ರೀಯ ಸ್ಥಳೀಯ ಸಂಸ್ಥೆ (ONIC) ನ ಲೂಯಿಸ್ ಅಕೋಸ್ಟಾ ಎಎಫ್‌ಪಿಗೆ ತಿಳಿಸಿದ್ದಾರೆ.
40 ಮೀಟರ್ ಎತ್ತರದವರೆಗೆ ಬೆಳೆದ ದೈತ್ಯ ಮರಗಳು, ಕಾಡು ಪ್ರಾಣಿಗಳು ಮತ್ತು ಭಾರೀ ಮಳೆಯ ನಡುವೆ ಮಕ್ಕಳಿಗಾಗಿ ನಡೆದ “ಆಪರೇಷನ್ ಹೋಪ್” ಹುಡುಕಾಟ ಕಷ್ಟಕರವಾಗಿತ್ತು. ಸಹಾಯಕ್ಕಾಗಿ ಮೂರು ಹೆಲಿಕಾಪ್ಟರ್‌ಗಳನ್ನು ಬಳಸಲಾಗಿತ್ತು. ಅವುಗಳಲ್ಲಿ ಒಂದು ಮಗು ಹ್ಯುಟೊಟೊ ಭಾಷೆಯಲ್ಲಿ ಕಾಡಿನ ಮೂಲಕ ಚಲಿಸುವ ವಿಮಾನವನ್ನು ನಿಲ್ಲಿಸುವಂತೆ ಹೇಳುವ ಧ್ವನಿ ಸಂದೇಶ ಸಿಕ್ಕಿತ್ತು. ಅದರ ಬೆನ್ನಲ್ಲೆ ಮಕ್ಕಳನ್ನು ಪತ್ತೆ ಮಾಡಲಾಗಿದೆ.