ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆಂಬ ಕಾರಣಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಮಡಿಕೇರಿ, ಕೆಪಿಸಿಸಿ ಮುಖಂಡ ಎಂ. ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಶಿಫಾರಸ್ಸು ಮಾಡಿದೆ. ಅಲ್ಲದೇ ಸುಳ್ಯ ಮತ್ತು ಕಡಬ ಸೇರಿ ಸುಳ್ಯ ವಿಧಾನ ಸಭಾ ಕ್ಷೇತ್ರದ 17 ಮಂದಿ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಆದೇಶ ಮಾಡಿದೆ. ಈ ಮೂಲಕ ತಾನು ಇರಲಾರದೆ ಇರುವೆ ಬಿಟ್ಟುಕೊಂಡ ಪರಿಸ್ಥಿತಿ ಸುಳ್ಯ ಕಾಂಗ್ರೆಸ್ ನದ್ದಾಗಿದೆ.
ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ವೇಳೆ ಕಾರ್ಯಕರ್ತರ ಅಭಿಪ್ರಾಯದಂತೆ ಮಡಿಕೇರಿ ಮೂಲದ ನಂದಕುಮಾರ್ ಹೆಚ್.ಎಂ ಅವರನ್ನು ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಚಿಂತಿಸಲಾಗಿತ್ತು. ಬಂಡಾಯದ ಬಾವುಟ ತಾರಕಕ್ಕೇರಿದ ಮೇಲೆ ಹಿರಿಯರ ಅಭಿಪ್ರಾಯದಂತೆ ಜಿ.ಕೃಷ್ಣಪ್ಪ ಅವರನ್ನೇ ಅಭ್ಯರ್ಥಿಯಾಗಿ ಮುಂದುವರೆಸಿದ್ದು, ನಂದಕುಮಾರ್ ಅಭಿಮಾನಿಗಳು ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು. ಕಾರ್ಯಕರ್ತರೊಂದಿಗೆ ಸಕ್ರಿಯರಾಗಿದ್ದ ನಂದಕುಮಾರ್ ಗೆ ಟಿಕೆಟ್ ತಪ್ಪಿದ್ದು ಕಾರ್ಯಕರ್ತರಲ್ಲೂ ಬೇಸರ ಉಂಟುಮಾಡಿತ್ತು.
ಆದರೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಹಠಕ್ಕೆ ಬಿದ್ದು ಜಿ.ಕೃಷ್ಣಪ್ಪ ಅವರನ್ನೇ ಅಭ್ಯರ್ಥಿಯಾಗಿ ನೀಡಲು ಕೆಪಿಸಿಸಿಗೆ ತಿಳಿಸಿದ್ದು ಈ ಮೂಲಕ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಪ್ಲಾನ್ ರೂಪಿಸಿತ್ತು. ಆದರೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅತಿಹೆಚ್ಚು ಮತಗಳ ಅಂತರದಿಂದ ಕೃಷ್ಣಪ್ಪರನ್ನು ಸೋಲಿಸಿ ಸುಳ್ಯದ ಪ್ರಥಮ ಮಹಿಳಾ ಶಾಸಕಿಯಾಗಿ ಆಯ್ಕೆಯಾದರು.
ಕೊಟ್ಟ ಕುದುರೆ ಏರದ ಕಾಂಗ್ರೆಸ್:
ಇತ್ತ ಸುಳ್ಯ ಕಾಂಗ್ರೆಸ್ ನ ಪರಿಸ್ಥಿತಿ ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ ,ಶೂರನೂ ಅಲ್ಲ ಎಂಬಂತಾಯಿತು. ಹಠಕ್ಕೆ ಬಿದ್ದು ಕೃಷ್ಣಪ್ಪರನ್ನು ಗೆಲ್ಲಿಸಲಾರದೆ ಇನ್ನೊಬ್ಬರ ಮೇಲೆ ತನ್ನ ವಿಫಲತೆಯನ್ನು ಹೊರಿಸುವ ಪ್ರಯತ್ನದಲ್ಲಿದೆ ಎಂದು ಅಮಾನತುಗೊಂಡ ನಾಯಕರು ಆರೋಪಿಸಿದ್ದಾರೆ.
ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಕಾಂಗ್ರೆಸ್ಸಿಗರಿಗೇ ಬೇಕಾಗಿಲ್ಲ..?
ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅನೇಕ ನಾಯಕರಿಗೆ ಬೇಕಾಗಿಲ್ಲ. ಅದಕ್ಕಾಗಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಎಲ್ಲ ಸಮೀಕ್ಷೆಗಳು, ಜನಾಭಿಪ್ರಾಯ ನನ್ನ ಪರವಾಗಿತ್ತು. ನಾನು ಅಭ್ಯರ್ಥಿಯಾಗಿದ್ದಲ್ಲಿ ಗೆಲುವು ಕೂಡಾ ಸಾಧ್ಯವಾಗುತ್ತಿತ್ತು. ಅಥವಾ ಉಳಿದ ಯಾರು ಅಭ್ಯರ್ಥಿಯಾಗಿದ್ದರೂ ಸೋಲಿನಲ್ಲಿ ಕನಿಷ್ಠ ಐದಾರು ಸಾವಿರವಷ್ಟೇ ಅಂತರವಿರುತ್ತಿತ್ತು. ಆದರೆ ಈ ನಾಯಕರಿಗೆ ಇದೆಲ್ಲಾ ಗೊತ್ತಾಗದಿದ್ದುದು ಯಾಕೆ? ಅಂದರೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅವರಿಗೆ ಬೇಕಿಲ್ಲ. ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸಲು ಈಗ ಈ ಕ್ರಮಕ್ಕೆ ಮುಂದಾಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸ್ವತಃ ಅವರ ಬೂತ್‍ನಲ್ಲೇ ಲೀಡ್ ದೊರಕಿಸಲು ಸಾಧ್ಯವಾಗಿಲ್ಲ’ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ನಂದಕುಮಾರ್ ಲೇವಡಿ ಮಾಡಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ನ ಒಳಜಗಳ ಸುಳ್ಯದಲ್ಲಿ ಬೀದಿಗೆ ಬಿದ್ದಿದ್ದು ಕೈ ಪಾಳಯದ ವಿಫಲತೆ ವಿರೋಧ ಪಕ್ಷಕ್ಕೆ ಆಹಾರವಾಗಿದೆ. ಜಾಲತಾಣಗಳಲ್ಲಿ ಕೂಡಾ ಕಾಂಗ್ರೆಸ್ ನ ಈ ವರ್ತನೆಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದು, ಮುಂದೆ ಈ ಹಾದಿರಂಪ ಎನಾಗುತ್ತೋ ಕಾದುನೋಡಬೇಕಿದೆ.