ಸಮಗ್ರ ನ್ಯೂಸ್: ಗಾಳಿಪಟದ ದಾರ ಯುವಕನೋರ್ವನ ಕುತ್ತಿಗೆ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಗದಗ ನಗರದ ಡಂಬಳ ನಾಕಾ ಬಳಿ ನಡೆದಿದೆ. ಪಿ ರವಿ ಮೃತ ದುರ್ದೈವಿ. ಆರು ದಿನಗಳ ಹಿಂದೆ ಗಾಳಿಪಟದ ದಾರ ಸಿಲುಕಿ ಕುತ್ತಿಗೆ ಸೀಳಿಹೋಗಿತ್ತು. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆರುದಿನಗಳಿಂದ ಸಾವುಬದುಕಿನೊಂದಿಗೆ ಹೋರಾಟ ನಡೆಸಿದ್ದ ರವಿ. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿಯಾಗಿರುವ ರವಿ. ಗದಗ ನಗರದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಳೆದ ಭಾನುವಾರ ಬೈಕ್ ಮೇಲೆ ಹೋಗುವಾಗ ಅಡ್ಡಲಾಗಿದ್ದ ಗಾಳಿಪಟದ ಮಾಂಜಾ ದಾರ ಕತ್ತಿಗೆ ಸಿಲುಕಿದೆ.
ಕಾರ ಹುಣ್ಣಿಮೆಯೆಂದು ಅವಳಿನಗರದಲ್ಲಿ ಗಾಳಿಪಟ ಹಾರಾಟ ನಡೆಸಲಾಗಿತ್ತು. ಹೀಗಾಗಿ ಎಲ್ಲೆಂದರಲ್ಲೇ ಗಾಳಿಪಟದ ದಾರಗಳು ಸಿಲುಕಿವೆ. ಇದನ್ನು ಗಮನಿಸದೇ ಬೈಕ್ ಮೇಲೆ ಹೋಗಿದ್ದ ಯುವಕ ರವಿ ದಾರಕ್ಕೆ ಸಿಲುಕಿ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ.
ಬ್ಯಾನ್ ಆದ ಮಾಂಝಾ ದಾರದಿಂದ ಗಾಳಿಪಟ ಹಾರಾಟ ಮಾಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ಮತ್ತು ಮನುಷ್ಯರ ಜೀವಕ್ಕೆ ಕುತ್ತು ಇದೆ. ಇದನ್ನು ಮಾರಾಟ ಮತ್ತು ಬಳಕೆ ಮಾಡದಂತೆ ತಡೆಗಟ್ಟಬೇಕೆಂದು ಸಂಘಟನೆಗಳು 15 ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಡೋಂಟ್ ಕೇರ್ ಎಂದಿದೆ. ಆದರೀಗ ಗಾಳಿಪಟದ ದಾರಕ್ಕೆ ಅಮಾಯಕ ಯುವಕ ಬಲಿಯಾಗಿದ್ದು ಮಾತ್ರ ಶೋಚನೀಯ.