Ad Widget .

‘ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸಲು ಅಧಿಕಾರಿಗಳೂ ಸಹಕರಿಸಿ’|ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ

ಸಮಗ್ರ ನ್ಯೂಸ್: ಸರಕಾರದ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳ ಜವಬ್ದಾರಿ ಹೆಚ್ಚಿನದ್ದು. ಅಧಿಕಾರಿಗಳು ಜನರನ್ನು ಯಾವುದೇ ಕಾರಣಕ್ಕೂ ಸತಾಯಿಸದೇ ಅವರಿಗೆ ಸೂಕ್ತ ಸಲಹೆಗಳನ್ನು ನೀಡಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸುವ ನನ್ನ ಕನಸಿಗೆ ಅಧಿಕಾರಿಗಳು ಸಹಕರಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.

Ad Widget . Ad Widget .

ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು. ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ಉತ್ತಮ ಅನುಭವವನ್ನು ಹೊಂದಿದ್ದೀರಾ, ಸರಕಾರಿ ಕೆಲಸ ಪಡೆದ ನೀವು ಭಾವ್ಯವಂತರು, ನಿಮ್ಮ ಭಾಗ್ಯದಿಂದ ಕ್ಷೇತ್ರದ ಜನರಿಗೂ ಉತ್ತಮ ಸೇವೆ ನೀಡಿ ಅವರಿಗೂ ಭಾಗ್ಯ ಸಿಗಲಿ, ಬಡವರಿಗೆ ಯಾವುದೇ ಕಾರಣಕ್ಕೂ ಸಮಸ್ಯೆ ಮಾಡದೇ ಮಾನವೀಯತೆ ತೋರಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಭ್ರಷ್ಟಚಾರ ಮಾಡದೇ ಉತ್ತಮ ಕೆಲಸ ನಿರ್ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮೀಸಲು ಕ್ಷೇತ್ರವಾಗಿರುವ ಸುಳ್ಯ ಅಭಿವೃದ್ಧಿ ಹೊಂದಿದೆ. ಆದರೂ ಮೀಸಲು ಕ್ಷೇತ್ರ ಯಾವುದರಲ್ಲೂ ಹಿಂದೆ ಉಳಿಯಬಾರದು. ಆದ್ದರಿಂದ ಎಲ್ಲಾ ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

Ad Widget . Ad Widget .

ಸಿಬ್ಬಂದಿ ಕೊರತೆಗೆ ನಲುಗಿದೆ ತಾಲೂಕು;
ಇಲಾಖಾಧಿಕಾರಿಗಳ ಸಭೆಯಲ್ಲಿ ಹೆಚ್ಚಿನ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಸ್ಪಷ್ಟವಾಗಿದೆ. ನ.ಪಂ.ನಲ್ಲಿ ಮೂರು ಪ್ರಮುಖ ಹುದ್ದೆಗಳು ಖಾಲಿ ಇವೆ. ಪಶುಸಂಗೋಪನಾ ಇಲಾಖೆಯಲ್ಲಿ ೫೩ರಲ್ಲಿ ೮ ಹುದ್ದೆ ಮಾತ್ರ ಭರ್ತಿಯಾಗಿದೆ. ತಾಲೂಕಿನ ೩ ಲಕ್ಷ ಪಶುಗಳಿಗೆ ಕೇವಲ ೮ ಸಿಬ್ಬಂದಿಗಳು ಇರುವುದು, ಸುಳ್ಯ ತಾಲೂಕಿನ ೧೮೪ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲೂ ೩೫ ಹುದ್ದೆ ಹೊರಗುತ್ತಿಗೆಯಲ್ಲಿದೆ, ಸರ್ವೆ ಇಲಾಖೆಯಲ್ಲಿ ೧೪ ಹುದ್ದೆ ಖಾಲಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ೧೧ರಲ್ಲಿ ೧ ಮಾತ್ರ ಖಾಯಂ ವಾರ್ಡನ್, ಕೃಷಿ ಇಲಾಖೆಯಲ್ಲಿ ಒಂದು ಹುದ್ದೆ ಮಾತ್ರವೇ ಭರ್ತಿಯಾಗಿದೆ, ಉಳಿದೆಲ್ಲ ಖಾಲಿಯಾಗಿವೆ, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ವಿವಿಧ ಹಲವು ಹುದ್ದೆಗಳು ಖಾಲಿ ಇವೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡುವ ವೇಳೆ ತಿಳಿಸಿದರು.

ಹಾಸ್ಟೇಲ್ ಸ್ಥಳಾಂತರ ಬೇಡ;
ಬೆಳ್ಳಾರೆಯ ಹಾಸ್ಟೇಲ್ ಸ್ಥಳಾಂತರ ಯಾಕಾಗಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯವರಲ್ಲಿ ಪ್ರಶ್ನಿಸಿದರು. ಪ್ರವೇಶಾತಿ ಕೊರತೆಯಿಂದ ಬೆಳ್ಳಾರೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯವನ್ನು ಮಂಗಳೂರಿಗೆ ಸ್ಥಳಾಂತರಿಸಲು ಹಾಗೂ ಸುಳ್ಯದ ವಿವೇಕಾನಂದ ವೃತ್ತ ಬಳಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯವನ್ನು ಹುಡುಗರ ಹಾಸ್ಟೇಲ್ ಆಗಿಸಲು ಮೇಲಾಧಿಕಾರಿಗಳಿಂದ ಒಂದು ಟಿಪ್ಪಣಿ ಬಂದಿದೆ ಎಂದು ಅಧಿಕಾರಿ ತಿಳಿಸಿದರು. ಯಾವುದೇ ಕಾರಣಕ್ಕೂ ಆ ರೀತಿ ಮಾಡಬೇಡಿ, ನಾವು ಇರುವ ಹಾಸ್ಟೇಲ್‌ಗಳನ್ನು ಉಳಿಸುವ ಬಗ್ಗೆ ಮುಂದಾಗಬೇಕು. ಈ ಬಗ್ಗೆ ಸಂಬಂಧಿಸಿದವರಲ್ಲಿ ಮಾತನಾಡುತ್ತೇನೆ ಎಂದು ಶಾಸಕರು ತಿಳಿಸಿದರು.

ಸಮಸ್ಯೆ ಸೃಷ್ಟಿಸಬೇಡಿ;
ಶಾಂತಿನಗರ ಕ್ರೀಡಾಂಗಣ ಕಾಮಗಾರಿ ಸಮಸ್ಯೆ ಏನು ಎಂದು ಶಾಸಕರು ನಿರ್ಮಿತಿ ಕೇಂದ್ರದ ಇಂಜಿನಿಯರ್ ಅವರಲ್ಲಿ ಪ್ರಶ್ನಿಸಿದರು. ಅನುದಾನ ಕೊರತೆಯಿಂದ ಕಾಮಗಾರಿ ವಿಳಂಬ ಆಗುತ್ತಿದೆ ಎಂದರು. ಮಣ್ಣು ಕುಸಿಯದಂತೆ ಕಾಮಗಾರಿ ನಡೆಸಲು ಸೂಚಿಸಲಾಗಿದೆ, ಅದರಂತೆ ಕಾಮಗಾರಿ ನಡೆಯುತ್ತಿದೆ, ಮಳೆ ನೀರು ಹರಿದು ಹೋಗಲು ಪೈಪ್ ಅಳವಡಿಕೆ, ಚೇಂಬರ್ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಭಾಗೀರಥಿ ಮುರುಳ್ಯ ಮಾತನಾಡಿ, ಕೂಡಲೇ ಸಮಸ್ಯೆ ಆಗದಂತೆ ಕಾಮಗಾರಿ ಪೂರ್ತಿಗೊಳಿಸಲು ಸೂಚಿಸಿದರು.

ವರ್ಗಾವಣೆಯಿಂದ ಸಮಸ್ಯೆ;
ಮೆಸ್ಕಾಂನಲ್ಲಿ ಈ ಹಿಂದೆ ವರ್ಗಾವಣೆ ಎಂಬುದು ಇರಲಿಲ್ಲ. ಇದೀಗ ವರ್ಗಾವಣೆ ನಡೆಯುತ್ತಿದೆ. ಇದರಿಂದ ಸುಳ್ಯದಿಂದ ಸಿಬ್ಬಂದಿಗಳು ವರ್ಗಾವಣೆಗೊಂಡು ಇಲ್ಲಿ ಸಿಬ್ಬಂದಿ ಕೊರತೆ ಎದುರಾಗಲಿದೆ, ಇಲ್ಲಿಂದ ಹೋಗುವ ಸಂಖ್ಯೆ ಹೆಚ್ಚಾಗಿದೆ, ಬರುವವರೇ ಇಲ್ಲ, ಆದ್ದರಿಂದ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯಬೇಕಿದೆ ಎಂದು ಅಧಿಕಾರಿಗಳು ಶಾಸಕರಲ್ಲಿ ಪ್ರಸ್ತಾಪಿಸಿದರು.

ಪೊಲೀಸ್ ಇಲಾಖೆ ಗೈರು;
ಸಭೆಯಲ್ಲಿ ಪ್ರಮುಖವಾದ ಪೊಲೀಸ್ ಇಲಾಖೆ ಗೈರಾಗಿತ್ತು. ಇತ್ತೀಚೆಗೆ ನಡೆದ ಮಳೆಗಾಲದ ಮುಂಜಾಗ್ರತಾ ಸಭೆಯಲ್ಲೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿರಲಿಲ್ಲ, ಇದೀಗ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲೂ ಪೊಲೀಸ್ ಇಲಾಖೆ ಗೈರಾಗಿರುವುದು ಕಂಡುಬಂದಿದೆ.

ಅಭಿನಂದನೆ;
ನೂತನವಾಗಿ ಶಾಸಕರಾಗಿ ಆಯ್ಕೆಯಾದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸುಳ್ಯ ತಾಲೂಕು ಆಡಳಿತ, ತಾ.ಪಂ., ಎಲ್ಲಾ ಅಧಿಕಾರಿಗಳ ಪರವಾಗಿ ಹೂಗುಚ್ಛ ನೀಡಿ ಸ್ವಾಗತಿಸಿ, ಅಭಿನಂದಿಸಲಾಯಿತು. ಸರಕಾರಿ ನೌಕರರ ಸಂಘದ ವತಿಯಿಂದಲೂ ಗೌರವಿಸಲಾಯಿತು.

ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್ ಎನ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *