ಸಮಗ್ರ ನ್ಯೂಸ್: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಮಹಾಕಾಲ್ ಲೋಕ ಕಾರಿಡಾರ್ ಭಾನುವಾರ ಮಧ್ಯಾಹ್ನ ಬೀಸಿದ ಬಿರುಗಾಳಿಯಿಂದ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿಯಾಗಿದೆ. ಏಳು ಪ್ರತಿಮೆಗಳಲ್ಲಿ ಆರು ಸ್ಥಳಾಂತರಗೊಂಡಿವೆ ಮತ್ತು ಎರಡು ಹಾನಿಗೊಳಗಾಗಿವೆ. ಇದರ ಜೊತೆಗೆ ಬಿರುಗಾಳಿಗೆ ಇಬ್ಬರು ಬಲಿಯಾಗಿದ್ದಾರೆ.
ಬಿರುಗಾಳಿಯಿಂದ ಪ್ರತಿಮೆಗಳಲ್ಲಿ ಕೆಲವು ನೆಲಕ್ಕೆ ಉರುಳಿದ್ದರಿಂದ ಕೈಗಳು ಮತ್ತು ತಲೆಗಳು ಮುರಿದಿವೆ. 2022 ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಮಹಾಕಾಲ್ ಲೋಕ ದೇವಾಲಯದ ಕಾರಿಡಾರ್‌ನಲ್ಲಿ ಘಟನೆ ಸಂಭವಿಸಿದೆ. ದೇವಾಲಯದ ಕಾರಿಡಾರ್‌ನಲ್ಲಿ ಆರು ಪ್ರತಿಮೆಗಳನ್ನು ಅವುಗಳ ಪೀಠದಿಂದ ಸ್ಥಳಾಂತರಿಸಿರುವುದರಿಂದ ಯಾರಿಗೂ ಗಾಯಗಳಾಗಿಲ್ಲ.
ಉಜ್ಜಯಿನಿ ಜಿಲ್ಲೆಯಲ್ಲಿ ಭಾರಿ ಬಿರುಗಾಳಿ ಬೀಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಉಜ್ಜಯಿನಿ ನಗರದಲ್ಲಿ ಬಿರುಗಾಳಿಗೆ ಮರವೊಂದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮತ್ತೋರ್ವ ನಾಗಡಾದಲ್ಲಿ ಮನೆಯ ಗೋಡೆ ಕುಸಿದು ಮೃತಪಟ್ಟಿದ್ದಾನೆ. ಇದೇ ಜಿಲ್ಲೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಸುಮಾರು 50 ಮರಗಳು ಹಾಗೂ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆ. ಮಹಾಕಾಲ್ ಲೋಕದಲ್ಲಿ 155 ವಿಗ್ರಹಗಳಿವೆ. ಹಾನಿಗೊಳಗಾದ ಮೂರ್ತಿಗಳನ್ನು ಗುತ್ತಿಗೆದಾರರೇ ದುರಸ್ತಿಗೊಳಿಸುತ್ತಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಉಜ್ಜಯಿನಿ ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಆಯುಕ್ತರೊಂದಿಗೆ ಈ ಕುರಿತು ಪರಿಶೀಲಿಸುವಂತೆ ತಿಳಿಸಿದ್ದಾರೆ.