ಸಮಗ್ರನ್ಯೂಸ್: ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಮೇ.29 ರಂದು ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ.
ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪೂರ್ವ ಸಿದ್ಧತೆಯೊಂದಿಗೆ ಕಾರ್ಯನಿರ್ವಹಿಸಲು ಜಿಲ್ಲೆಯ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ, ತುರ್ತು ಸಂದರ್ಭದಲ್ಲಿ ಜನರಿಗೆ ನೆರವು ನೀಡಲು ಕಟ್ರೋಲ್ ರೂಂ ಆರಂಭಿಸಲು ಜಿಲ್ಲಾಡಳಿತ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚನೆ ನೀಡಿರುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪ, ಮಳೆ ಹಾನಿಗೆ ಸಂಬಂಧಿಸಿದಂತೆ ತುರ್ತು ನೆರವು ನೀಡಲು ಜಿಲ್ಲೆಗೆ ರೂ.3.5ಕೋಟಿ ನಿಧಿ ಬಿಡುಗಡೆ ಮಾಡಲಾಗಿದೆ. ತಕ್ಷಣ ಪರಿಹಾರವಾಗಿ ರೂ.10 ಸಾವಿರ ಹಾಗೂ ಬಳಿಕ ಸಂಪೂರ್ಣ ಹಾನಿಯ ವರದಿಯನ್ನು ವಾರದೊಳಗೆ ನೀಡಿ ಉಳಿದ ಪರಿಹಾರ ಮೊತ್ತವನ್ನು ವಿಳಂಬ ಮಾಡದೆ ಸಂತೃಸ್ತರಿಗೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಳಜಿ ಕೇಂದ್ರ ತುರ್ತು ಕಾರ್ಯಾಚರಣೆಗೆ ವಿಶೇಷ ತಂಡ, ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ತ್ವರಿತಗೊಳಿಸಲು , ಜಿಲ್ಲೆಯಲ್ಲಿ ಕಡಿಯುವ ನೀರು, ಶಾಲಾರಂಭ , ಆರೋಗ್ಯ ವಿಚಾರಗಳಿಗೆ ಸಂಬಂಧಿಸಿದಂತೆ ವಿವಿಧ ಅಧಿಕಾರಿಗಳು ಸಮಸ್ಯೆ ಪರಿಹಾರ ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಸಂವಿಧಾನ ಬದ್ಧವಾಗಿ ಸರಕಾರದ ಆಡಳಿತ ನಡೆದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ ಜೊತೆ ಯಾಗಿ ಕಾರ್ಯ ನಿರ್ವಹಿಸಬೇಕಾ ಗಿದೆ.ಕೋಮು ಸೌಹಾರ್ದತೆ ಜನರಲ್ಲಿ ಸಾಮರಸ್ಯ ಮೂಡಿಸಲು ಧಾರ್ಮಿಕ ಮುಖಂಡರು ಸಂಘ ಸಂಸ್ಥೆ ಗಳ ಪಾತ್ರ ಮುಖ್ಯ. ಇತ್ತೀಚೆಗೆ ಸಮಾಜದಲ್ಲಿ ಉರಿಗೌಡ, ನಂಜೇ ಗೌಡ ಪ್ರಕರಣದ ಬಗ್ಗೆ ಆದಿ ಚುಂಚನಗಿರಿ ಮಠದ ಧಾರ್ಮಿಕ ಮುಖಂಡರ ಹೇಳಿಕೆ ಅನಗತ್ಯ ಗೊಂದಲಗಳಿಗೆ ತೆರೆ ಎಳೆದಂತಾಗಿದೆ. ಇದೊಂದು ಉದಾಹರಣೆ ನಮಗೆ ಮಾದರಿಯಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾಧಿಕಾರಿ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.