ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬಂಡಾಜೆ ಫಾಲ್ಸ್ ಕಡೆ ಟ್ರೆಕ್ಕಿಂಗ್‌ಗೆ ಬಂದ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾಗಿದ್ದು ಸತತ ಹುಡುಕಾಟದ ಬಳಿಕ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಬೆಂಗಳೂರು ಜೆಪಿ ನಗರದ ಪರೋಸ್ ಅಗರ್ವಾಲ್ ಎಂದು ಹೇಳಲಾಗಿರುವ ಯುವಕ ರಾಣಿಝರಿ ಸಮೀಪದವರೆಗೆ ಬೈಕ್‌ನಲ್ಲಿ ಬಂದಿದ್ದು ಇಲ್ಲಿಂದ ಬಂಡಾಜೆ ಫಾಲ್ಸ್‌ನ ಬದಿಯಿಂದ ಟ್ರೆಕ್ಕಿಂಗ್ ನಡೆಸಲು ಮುಂದಾಗಿದ್ದಾನೆ.
ಆದರೆ ಸಂಜೆಯಾಗುತ್ತಿದ್ದಂತೆ ದಾರಿ ತಪ್ಪಿದ್ದು ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿದ್ದಾನೆ. ಆದರೆ ಆತನಿರುವ ಸ್ಥಳ ಪತ್ತೆ ಹಚ್ಚಲು ಕ್ಲಿಷ್ಟ ಪರಿಸ್ಥಿತಿ ಇದೆ. ಇಲ್ಲಿನ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದಿರುವುದು, ಸಂಪೂರ್ಣ ಅರಣ್ಯ ಪ್ರದೇಶವಾದ ಕಾರಣ ಹಾಗೂ ಜಾರುವ ಬಂಡೆಗಳು ಇರುವುದರಿಂದ ಈತ ಇರಬಹುದಾದ ನಿಗದಿತ ಸ್ಥಳ ಹುಡುಕಲು ಹರಸಾಹಸ ನಡೆಸಬೇಕಾಗಿದೆ.
ಈಗಾಗಲೇ ಬಾಳೂರು ಪೊಲೀಸರು ಭಂಡಾಜೆ ಫಾಲ್ಸ್‌ನ ತಮ್ಮ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಫಾಲ್ಸ್‌ನ ತಳ ಹಾಗೂ ಇತರ ಕೆಲವು ಭಾಗಗಳು ದ.ಕ. ಜಿಲ್ಲೆ ವ್ಯಾಪ್ತಿಯಲ್ಲಿದ್ದು ಇಲ್ಲಿಂದ ಬೆಳ್ತಂಗಡಿ ವನ್ಯಜೀವಿ ವಿಭಾಗದ ಸಿಬಂದಿ ಹುಡುಕಾಟ ಮುಂದುವರಿಸಿದ್ದರು.
ಪ್ರದೇಶವು ಸಂಪೂರ್ಣ ಕತ್ತಲ ಪರಿಸರ ಹಾಗೂ ಕಾಡಾನೆ ಸಹಿತ ಇತರ ವನ್ಯಜೀವಿಗಳು ಸಂಚರಿಸುವ ಸ್ಥಳವಾಗಿದ್ದು ಹಲವು ರೀತಿಯ ಅಪಾಯಗಳ ಮಧ್ಯೆ ಹುಡುಕಾಟ ನಡೆಸಲಾಗಿತ್ತು.
ಆಗಾಗ ಮೊಬೈಲ್ ಕರೆಗೆ ಸಿಗುತ್ತಿರುವ ಯುವಕನಿಗೆ ಪೊಲೀಸರು ಮತ್ತು ಅರಣ್ಯ ಇಲಾಖೆ, ಧೈರ್ಯ ತುಂಬಿ, ಹುಡುಕಾಟ ಮುಂದುವರಿಸಿದ್ದರು. ರಾತ್ರಿ ಹುಡುಕುತ್ತಿದ್ದ ತಂಡವೊಂದಕ್ಕೆ ಕಾಡಿನಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.