ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆ ಚುನಾವಣೆ ಕಳೆದು ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಸೇರಿದಂತೆ 10 ಮಂದಿ ಈಗಾಗಲೇ ಸಂಪುಟ ರಚನೆ ಮಾಡಿದ್ದು, ಇಂದು(ಮೇ.27) 24 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಬಾರಿ ಮಂತ್ರಿ ಸ್ಥಾನದ ಆಕಾಂಕ್ಷಿಗಳ ದಂಡು ಜಾಸ್ತಿನೇ ಇದ್ದರೂ ಕರಾವಳಿಗೆ ಒಂದಾದರೂ ಮಂತ್ರಿ ಸ್ಥಾನ ಲಭಿಸುವ ನಿರೀಕ್ಷೆ ಇತ್ತು. ಅವಿಭಜಿತ ದ.ಕ ಜಿಲ್ಲೆಯಲ್ಲಿ ಎರಡೇ ಸ್ಥಾನ ಗೆದ್ದಿರುವ ಕಾಂಗ್ರೆಸ್ ಉಳ್ಳಾಲ ಶಾಸಕ ಯು.ಟಿ ಖಾದರ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುತ್ತೆ, ಅಥವಾ ಸಚಿವ ಸ್ಥಾನ ಪಕ್ಕಾ ಅಂತ ಹೇಳಲಾಗಿತ್ತು. ಆದರೆ ಯು.ಟಿ ಖಾದರ್ ರನ್ನು ವಿಧಾನಸಭಾ ಸ್ಪೀಕರ್ ಮಾಡಿ ‘ಹಗ್ಗವಿಲ್ಲದೆ ಕಟ್ಟಿಹಾಕಿದೆ’.
ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಖಾದರ್ ಸಾಹೇಬ್ರು ಈ ಸ್ಪೀಕರ್ ಹುದ್ದೆ ಬೇಡವೆನ್ನಲೂ ಸಾಧ್ಯವಾಗದೆ ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಇದಾದ ಬಳಿಕ ನೂತನ ಸಚಿವ ಸಂಪುಟದಲ್ಲಿ ಕರಾವಳಿಯವರೇ ಆದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಗೆ ಜಾತಿ ಹಾಗೂ ಹಿರಿತನದ ಅಧಾರದಲ್ಲಿ ಮಂತ್ರಿ ಸ್ಥಾನ ಲಭಿಸುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಬಿ.ಕೆ ಹರಿಪ್ರಸಾದ್ ರನ್ನು ಕೈಬಿಟ್ಟು, ಕರಾವಳಿಗೆ ‘ಕೈ’ ಎತ್ತಿದೆ.
ಸಂಪುಟ ವಿಸ್ತರಣೆಗೆ ಮುನ್ನ ಯು.ಟಿ ಖಾದರ್, ಬಿ.ಕೆ ಹರಿ ಪ್ರಸಾದ್, ಮಂಜುನಾಥ ಭಂಡಾರಿ, ಅಶೋಕ್ ಕುಮಾರ್ ರೈಯವರ ಪೈಕಿ ಎರಡು ಜನರಿಗೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕರಾವಳಿ ಜನರು ಇದ್ದರು. ಖಾದರ್ ಗೆ ಸಚಿವ ಸ್ಥಾನಮಾನದ ಸಮಾನವಾದ ಸ್ಪೀಕರ್ ಹುದ್ದೆ ನೀಡಲಾಗಿದ್ದಿರೂ ಅವರ ಮತಕ್ಷೇತ್ರದ ಜನ ಅದನ್ನು ಒಪ್ಪಿಕೊಳ್ಳಲು ರೆಡಿ ಇರಲಿಲ್ಲ. ಕೊನೆಗೆ ಖಾದರ್ ಅವರೇ ‘ ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತೆ, ಸ್ಪೀಕರ್ ಎಲ್ಲರೂ ಆಗಲಾರರು’ ಎಂದು ಹೇಳಿ ಮತದಾರರನ್ನು ಸಮಾಧಾನಿಸಿದ್ದರು. ಆದರೆ ಇದೀಗ ಒಂದೂ ಸಚಿವ ಸ್ಥಾನವನ್ನೂ ಕಾಂಗ್ರೆಸ್ ಕರಾವಳಿಗೆ ನೀಡದೆ ಅನ್ಯಾಯ ಮಾಡಿದೆ.
ಇನ್ನು ಕರಾವಳಿ ಕಾಂಗ್ರೆಸ್ಸಿಗರೂ ಈ ಕುರಿತಂತೆ ಅಸಮಾಧಾನಗೊಂಡಿದ್ದು, ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಬಿ.ಕೆ ಹರಿಪ್ರಸಾದ್ ಪರ ಬ್ಯಾಟಿಂಗ್ ಶುರು ಮಾಡಿದ್ದಾರೆ. ಪ್ರಮುಖ ಬಿಲ್ಲವ ಸಮುದಾಯದ ಮುಖಂಡ ಹರಿಪ್ರಸಾದ್ ಗೆ ಜಾತಿ ಹಾಗೂ ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ನೀಡಬೇಕಿತ್ತು. ಹೈಕಮಾಂಡ್ ಜೊತೆಗೂ ಉತ್ತಮ ಸಂಬಂಧ ಇರಿಸಿಕೊಂಡಿದ್ದ ಅವರು ಇದೇ ನಿತೀಕ್ಷೆಯಲ್ಲಿದ್ದರು.
ಇದೀಗ ಕರಾವಳಿಗೆ ಒಂದೂ ಸಚಿವ ಸ್ಥಾನ ನೀಡದೇ ಇರುವ ಕಾರಣ ಬೇರೆ ಜಿಲ್ಲೆಯವರೇ ಉಡುಪಿ ಹಾಗೂ ದ.ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇದನ್ನು ಕರಾವಳಿ ಕಾಂಗ್ರೆಸ್ ಹೇಗೆ ಸ್ವಾಗತಿಸುತ್ತೆ ಕಾದುನೋಡಬೇಕಿದೆ.