ಸಮಗ್ರ ನ್ಯೂಸ್: ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಕೆ. ಹರಿಪ್ರಸಾದ್‌ಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಇದರಿಂದ ಕೆಂಡಾಮಂಡಲವಾಗಿರುವ ಅವರು ರಾಜೀನಾಮೆಗೆ ಮುಂದಾಗಿದ್ದಾರೆ.
ಬಿಜೆಪಿ ವಿರುದ್ಧ ಸೈದ್ಧಾಂತಿಕವಾಗಿ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು, ಅದರಂತೆ ಮೊದಲ ಸಚಿವ ಸಂಪುಟ ರಚನೆಯಲ್ಲಿಯೇ ಅವಕಾಶ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಮೊದಲ ಸಂಪುಟ ರಚನೆಯಲ್ಲೂ ಸಚಿವ ಸ್ಥಾನ ಸಿಗಲಿಲ್ಲ, ಇದೀಗ 24 ಜನರಿಗೆ ಮಂತ್ರಿ ಸ್ಥಾನ ಒಲಿದು ಬಂದಿದ್ದು, ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಯಲ್ಲಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದ ಹರಿಪ್ರಸಾದ್ ಅವರನ್ನು ಮಂತ್ರಿ ಮಾಡಲಾಗುವುದು ಎಂಬ ನಿರೀಕ್ಷೆ ಆರಂಭದಲ್ಲೆ ಇತ್ತು.
ಕರಾವಳಿಯ ಉಭಯ ಜಿಲ್ಲೆಗಳ 13 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಎರಡು ಮಾತ್ರ. ಈ ಪೈಕಿ ಖಾದರ್ ಸ್ಪೀಕರ್ ಆಗಿದ್ದಾರೆ. ಇನ್ನೊಬ್ಬರು ಮೊದಲ ಬಾರಿ ಶಾಸಕರಾಗಿರುವುದರಿಂದ ಕರಾವಳಿ ಮೂಲದವರಾಗಿರುವ ಹರಿಪ್ರಸಾದ್‌ಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗುತ್ತಿತ್ತು.
ಹರಿಪ್ರಸಾದ್ ರನ್ನು ಮಂತ್ರಿ ಮಾಡಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗುವುದು ಎನ್ನಲಾಗಿತ್ತು. ಈ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಬೇರೆ ಜಿಲ್ಲೆಯವರೇ ಉಸ್ತುವಾರಿಯಾಗಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.