ಸಮಗ್ರ ನ್ಯೂಸ್: ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿದ್ದ ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಶ್ವಥ್ ನಾರಾಯಣ್, ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್ ಅಶ್ವಥ್ ನಾರಾಯಣ್ ಆರೋಪಕ್ಕೆ ಉತ್ತರ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪ್ರಕರಣ ದಾಖಲಿಸಿದ್ದನ್ನೇ ದ್ವೇಷ ರಾಜಕಾರಣ ಎನ್ನುತ್ತಿರುವ ಅಶ್ವಥ್ ನಾರಾಯಣ್ ಅವರೇ, ತಾವು ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆಗೆ ಕರೆ ನೀಡಿದ್ದು “ಪ್ರೇಮ ರಾಜಕಾರಣ” ಎನಿಸಿಕೊಳ್ಳುತ್ತದೆಯೇ? ಎಂದು ಪ್ರಶ್ನೆ ಮಾಡಿದೆ.
ರಾಜ್ಯದ ಮುತ್ಸದ್ದಿ ನಾಯಕನನ್ನು ಕೊಲೆ ಮಾಡುವಂತೆ ಕರೆ ಕೊಟ್ಟರೂ ಸುಮ್ಮನಿದ್ದರೆ ಕಾನೂನು ಸಂವಿಧಾನಗಳಿಗೆ ಮಾಡುವ ಅಪಚಾರವಾಗಲಿದೆ ಎಂದು ಹೇಳಿರುವ ಕರ್ನಾಟಕ ಕಾಂಗ್ರೆಸ್ ಪ್ರಕರಣ ದಾಖಲಿಸಿದ್ದನ್ನು ಸಮರ್ಥಿಸಿಕೊಂಡಿದೆ.
ಅಶ್ವಥ್ ನಾರಾಯಣ್ ಮಾತ್ರವಲ್ಲದೆ, ಸಿದ್ದರಾಮಯ್ಯ ಅವರ 24 ಹಿಂದೂಗಳ ಕೊಲೆಗೆ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ ಹರೀಶ್ ಪೂಂಜ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಇವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಕ್ಕೆ ಬಿಜೆಪಿ ಕಿಡಿ ಕಾರಿದ್ದು, ಜನರಿಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸುವುದನ್ನು ಬಿಟ್ಟು ಕಾಂಗ್ರೆಸ್ ದ್ವೇಷ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದೆ.