ಸಮಗ್ರ ನ್ಯೂಸ್: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ಐದು ಗ್ಯಾರಂಟಿ ನೀಡಿದೆ, ಆ ಪೈಕಿ 200 ಯೂನಿಟ್ ವಿದ್ಯುತ್ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣ ಉಚಿತ ಎಂದು ಹೇಳಿ ಈವರೆಗೆ ಜಾರಿ ಮಾಡದೆ ಇರುವುದಕ್ಕೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೆಂಡ ಕಾರಿ ಜನರಿಗೆ ವಿದ್ಯುತ್ ಬಿಲ್ ಕಟ್ಟಬೇಡಿ ಹಾಗೂ ಮಹಿಳೆಯರು ಟಿಕೆಟ್ ಪಡೆಯುವುದಕ್ಕೆ ಹಣ ನೀಡಬೇಡಿ ಎಂದು ಕರೆ ಕೊಟ್ಟಿವೆ.
ಬಿಜೆಪಿ ಹಾಗೂ ಜೆಡಿಎಸ್ ಅವರವರ ಪಕ್ಷ ಕಚೇರಿಯಲ್ಲಿ ಸುದ್ದಿ ಗೋಷ್ಟಿ ನಡೆಸಿ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಭರವಸೆ ನೀಡಿ ಅಧಿಕ್ಕಾರಕ್ಕೆ ಬಂದ ಮೇಲೆ ಮೋಸ ಮಾಡಿದೆ ಎಂದು ವಿಪಕ್ಷಗಳು ಕಾಂಗ್ರೆಸ್ ವಿರುದ್ಧ ಕೆಂಡ ಕಾರಿವೆ.
ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವರುಗಳಾದ ಗೋವಿಂದ್ ಕಾರಜೋಳ ಹಾಗೂ ಆರ್ ಅಶೋಕ್, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ಮಹಿಳೆಯರಿಗೆ ಫ್ರೀ ಬಸ್ ಪಾಸ್ ಎಂದು ಭರವಸೆ ನೀಡಿ, ಈಗ ದಾರಿಯಲ್ಲಿ ಹೋಗುವವರಿಗೆಲ್ಲ ಉಚಿತ ಬಸ್ ಪಾಸ್ ನೀಡಲು ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳ್ತಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಗ್ಯಾರಂಟಿಗಳ ವಿಚಾರವಾಗಿ ಮಾತನಾಡಿರುವ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, 200 ಯುನಿಟ್ ವಿದ್ಯುತ್ ಗೆ ದುಡ್ಡು ಕಟ್ಡಬೇಡಿ, ಬಸ್ ಗಳಲ್ಲಿ ಮಹಿಳೆಯರು ಯಾರು ಟಿಕೆಟ್ ತೆಗೆದುಕೊಳ್ಳಬೇಡಿ. ದುಡ್ಡು ಕೊಡಬೇಡಿ ಎಂದು ಜನರಿಗೆ ಕರೆ ನೀಡಿದರು.
ವಿದ್ಯುತ್ ಉಚಿತವಾಗಿ ನೀಡಲು 24 ಸಾವಿರ ಕೋಟಿ ಬೇಕು ಎಂದು ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ವಿಷಯದಲ್ಲಿ ನಿಜಕ್ಕೂ ಬೀದಿಗಿಳಿಯುತ್ತೇವೆ. ನನ್ನ ಪಕ್ಷ ಮುಂದಿನ 5 ವರ್ಷ ವಿಷಯಾಧಾರಿತ ಹೋರಾಟ ಮಾಡ್ತೀವಿ. ಹಣದ ಬಲದಿಂದ ಚುನಾವಣಾ ಆಗದಂತೆ ಬದಲಾವಣೆ ತರ್ತೀವಿ. ಮತದಾರರಿಗೆ ಮನವಿ ಮಾಡ್ತೀವಿ, ದುಡ್ಡು ಕೊಟ್ಡ ಮೇಲೆ ಓಟು ಹಾಕ್ತೀವಿ ಅನ್ನೋ ಜನರಿದ್ದಾರೆ. ಒಪ್ಪತ್ತಿನ ಕೂಳಿಗೆ, ಬದುಕನ್ನು ಹಾಳು ಮಾಡಿಕೊಳ್ತಿದ್ದೀರಾ. ಜನರು ಈ ಬಗ್ಗೆ ಯೋಚನೆ ಮಾಡಬೇಕಿದೆ. 5 ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡೋಕೆ ಆಗಲ್ಲ, ಎಂದರು.