ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾದ ಗಡಾಯಿಕಲ್ಲಿನಲ್ಲಿ ಸಿಡಿಲು ಬಡಿದು ಬೆಂಕಿ ಉಂಟಾದ ಘಟನೆ ಮಂಗಳವಾರ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ಬುಧವಾರ ಪರಿಶೀಲನೆ ನಡೆಸಲಾಯಿತು.
ಆರ್ ಎಫ್ ಒ ಸ್ವಾತಿ, ಅವರ ನಿರ್ದೇಶನದಂತೆ ಡಿ ಆರ್ ಎಫ್ ಓ ಕಿರಣ್ ಪಾಟೀಲ್, ಗಸ್ತು ಪಾಲಕರಾದ ಹೇಮಂತ್ ಹಾಗೂ ರಾಘವೇಂದ್ರ ಗಡಾಯಿಕಲ್ಲಿಗೆ ತೆರಳಿ ಪರಿಶೀಲನೆ ನಡೆಸಿದರು. ಮಂಗಳವಾರ ಬೆಂಕಿ ಉಂಟಾದ ತಕ್ಷಣ ಪರಿಶೀಲನೆ ನಡೆಸಲಾಗಿದ್ದರು ಕತ್ತಲು ಹಾಗೂ ಮೋಡಕವಿದ ವಾತಾವರಣದ ಕಾರಣ ಅದು ಪೂರ್ಣಗೊಂಡಿರಲಿಲ್ಲ.
ಗಡಾಯಿಕಲ್ಲಿನ ಒಂದು ಪ್ರದೇಶದ ಎರಡು ಮೂರು ಕಡೆಗಳಲ್ಲಿ ಸಿಡಿಲಿನ ಪರಿಣಾಮ ಅಲ್ಪ ಪ್ರಮಾಣದಲ್ಲಿ ಬೆಂಕಿ ಉತ್ಪತ್ತಿಯಾಗಿ ಅದು ಒಣಹುಲ್ಲನ್ನು ಆವರಿಸಿದೆ.ತಕ್ಷಣ ಮಳೆ ಬಂದ ಕಾರಣ ಬೆಂಕಿ ಹೆಚ್ಚಿನ ಭಾಗಕ್ಕೆ ಪಸರಿಸಿಲ್ಲ. ಬೆಂಕಿಯು ಸಂಪೂರ್ಣ ನಂದಿದ್ದು ಸಿಡಿಲಿನಿಂದ ಗಡಾಯಿಕಲ್ಲಿನ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.