ಸಮಗ್ರ ನ್ಯೂಸ್: ಮಂಗಳೂರು ನಗರ ಸೇರಿದಂತೆ ದಕ್ಷಿಣ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆ ಬಂದ್ ಮಾಡಿ ಸರಕಾರಿ ಬಸ್ ಸೇವೆಗೆ ಮಾತ್ರ ಅವಕಾಶ ನೀಡುವ ಕುರಿತು ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರದಲ್ಲಿ ಚಿಂತನೆ ನಡೆದಿದೆ.
ಕರಾವಳಿಯಲ್ಲಿ ಹರಡುತ್ತಿರುವ ಕೋಮುವಾದವನ್ನು ಮಟ್ಟಹಾಕುವ ಉದ್ದೇಶದಿಂದಲೇ ಖಾಸಗಿ ಬಸ್ ಸೇವೆ ರದ್ದು ಮಾಡಲು ಸರಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಕರಾವಳಿಯಲ್ಲಿ ಕೋಮುವಾದ ಬೆಳೆಯುವಲ್ಲಿ ಖಾಸಗಿ ಬಸ್ ವಲಯದ ಪಾತ್ರ ಇರುವುದು ಮತ್ತು ಕರಾವಳಿಯ ಖಾಸಗಿ ಬಸ್ ಮಾಫಿಯಾದ ಕಪಿಮುಷ್ಠಿ ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವುದನ್ನು ಮನಗಂಡಿರುವ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆಯನ್ನು ರದ್ದು ಮಾಡುವ ಕುರಿತು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು ಕರಾವಳಿಯಲ್ಲಿ ಕೋಮುವಾದಕ್ಕೆ ಉತ್ತೇಜನ ಕೊಡುತ್ತಿರುವ ಬಗ್ಗೆ ಸರಕಾರಕ್ಕೆ ಗುಪ್ತಚರ ಮಾಹಿತಿ ತಲುಪಿದೆ. ಖಾಸಗಿ ಬಸ್’ಗಳಲ್ಲಿ ಅನ್ಯಕೋಮಿನ ಯುವಕ ಯುವತಿಯರು, ವಿದ್ಯಾರ್ಥಿಗಳು ಆಕಸ್ಮಿಕವಾಗಿ ಒಂದೇ ಸೀಟ್ ನಲ್ಲಿ ಕೂತು ಪ್ರಯಾಣ ಮಾಡುವಾಗ ಅವರ ಮೇಲೆ ಹಲ್ಲೆ ನಡೆದಿರುವ ಅನೇಕ ಘಟನೆಗಳು ಜಿಲ್ಲೆಯಲ್ಲಿ ನಡೆದಿದೆ. ಈ ಹಲ್ಲೆಗಳಿಗೆಲ್ಲಾ ಖಾಸಗಿ ಬಸ್ ಚಾಲಕರು ಮತ್ತು ಕಂಡೆಕ್ಟರ್ ಗಳೇ ಮೂಲ ಕಾರಣಕರ್ತರಾಗಿದ್ದು, ಬಸ್ ಡ್ರೈವರ್ ಅಥವಾ ಕಂಡೆಕ್ಟರ್ ಹಿಂದುತ್ವದ ಸಂಘಟನೆಗಳಿಗೆ ಮಾಹಿತಿ ಕೊಟ್ಟು ತಮ್ಮದೇ ಬಸ್’ನಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುತ್ತಿರುವ ಬಗ್ಗೆ ಸರಕಾರಕ್ಕೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಖಾಸಗಿ ಬಸ್’ಗಳ ಬಹುತೇಕ ಡ್ರೈವರ್ ಮತ್ತು ಕಂಡೆಕ್ಟರ್ ಗಳು ಬಜರಂಗದಳ, ವಿಹೆಚ್’ಪಿ, ಹಿಂಜಾವೇ ಮುಂತಾದ ಹಿಂದುತ್ವ ಸಂಘಟನೆಗಳ ಸದಸ್ಯರಾಗಿರುವ ಕಾರಣ ಇಂತಹ ಘಟನೆಗಳು ಕರಾವಳಿಯಲ್ಲಿ ಪುನರಾವರ್ತನೆಯಾಗುತ್ತಿದ್ದು, ಇದರಿಂದ ಕರಾವಳಿಯಲ್ಲಿ ಕೋಮುದ್ವೇಷವೂ ಹೆಚ್ಚಳ ಆಗುತ್ತಿದೆ. ಈ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆಯನ್ನು ರದ್ದು ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಂಗಳೂರು ನಗರ, ಹೊರವಲಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 500ರಷ್ಟು ಅಧಿಕ ಖಾಸಗಿ ಬಸ್’ಗಳು ಸೇವೆ ನೀಡುತ್ತಿದೆ. ಖಾಸಗಿ ಬಸ್ ಸೇವೆ ರದ್ದು ಮಾಡಿದರೆ ಹೊಸದಾಗಿ ಅಷ್ಟೇ ಸಂಖ್ಯೆಯ ಸರಕಾರಿ ಬಸ್’ಗಳನ್ನು ಜಿಲ್ಲೆಗೆ ನೀಡುವ ಬಗ್ಗೆ ಸರಕಾರ ಯೋಚನೆ ಮಾಡಿದೆ ಎಂದು ತಿಳಿದುಬಂದಿದೆ.
ರಾಜ್ಯ ಕಾಂಗ್ರೆಸ್ ಸರಕಾರದ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್’ಗಳು ಕಣ್ಮರೆಯಾಗಿ ಸರಕಾರಿ ಬಸ್’ಗಳ ಓಡಾಟ ಮಾತ್ರ ಕಂಡುಬರಲಿದೆ. ಸರಕಾರಿ ಬಸ್’ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದರಿಂದ ಮಹಿಳೆಯರು ಹೆಚ್ಚು ಲಾಭ ಪಡೆಯಬಹುದು ಎಂಬ ಲೆಕ್ಕಾಚಾರವೂ ಇದೆ.