ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಯ ಮೊಟ್ಟ ಮೊದಲ ವಿಶೇಷ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಮೇ.24ರ ವರೆಗೆ ನಡೆಯಲಿದೆ. ಸಾರ್ವತ್ರಿಕ ಚುನಾವಣೆಯ ಬಳಿಕ ವಿಧಾನಸಭೆಗೆ ಆಯ್ಕೆಯಾದ 224 ಜನಪ್ರತಿನಿಧಿಗಳ ಪ್ರಮಾಣವಚನ ಕಾರ್ಯಕ್ರಮ ಅಧಿವೇಶನದಲ್ಲಿ ನಡೆಯಿತು.
ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧಿವೇಶನದಲ್ಲಿ ಅಧಿಕಾರ ಪದ ಮತ್ತು ಗೌಪ್ಯತಾ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಅವರು ಕುಲದೇವರಾದ ಸತ್ಯಸಾರಮಣಿ, ಸತ್ಯ ಪದನಾಜಿ, ಅಮ್ಮನವರು ಹಾಗೂ ಮತದಾರ ಭಾಂದವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಕೆಲವು ಸದಸ್ಯರು ಹೆಸರುಗಳ ಉಲ್ಲೇಖಿಸಿದಾಗ ಸ್ವಲ್ಪ ಹೊತ್ತು ಗೊಂದಲ ಸೃಷ್ಟಿಯಾಯಿತು.
ಈ ವೇಳೆ ಸ್ಪೀಕರ್ ಆರ್ ವಿ ದೇಶಪಾಂಡೆ, “ಯಾರೂ ಸಂವಿಧಾನ ಪ್ರಕಾರ ಪ್ರಮಾಣ ವಚನ ತೆಗೆದು ಕೊಳ್ಳುವುದಿಲ್ಲವೋ ಅಲ್ಲಿಗೇ ಸ್ಟಾಪ್ ಮಾಡಿ ಬಿಡಿ, ನಾನು ಆರಂಭದಲ್ಲಿಯೇ ಸಂವಿಧಾನ ಮತ್ತು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಹೇಳಿದ್ದೇನೆ” ಎಂದು ಕಾರ್ಯದರ್ಶಿಗೆ ಸೂಚಿಸಿದರು. ಅದಾದ ಬಳಿಕ ಪ್ರಮಾಣವಚನ ಕಾರ್ಯಕ್ರಮ ದೇವರ ಮತ್ತು ಸಂವಿಧಾನದ ಹೆಸರಲ್ಲಿ ನಡೆಯಿತು.