ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಳೆ ಹೊಸ ಸರ್ಕಾರ ರಚನೆ ಮಾಡಲಿದೆ. ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಇದರ ಜೊತೆಗೆ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಹಾಗೂ ಕೆಲ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಿಎಂ ಕುರ್ಚಿಗಾಗಿ ನಡೆದ ಜಟಾಪಟಿಯಲ್ಲಿ ಸಿದ್ದು ಕೈ ಮೇಲಾಗಿದೆ. ದೆಹಲಿಯಲ್ಲಿ ಸಿಎಂ ಪಟ್ಟ ಘೋಷಣೆಯಾಗುತ್ತಿದ್ದಂತೆ, ಇತ್ತ ಸಿದ್ದರಾಮಯ್ಯ 1 ಕೋಟಿ ರೂಪಾಯಿ ಟೋಯೋಟಾ ವೆಲ್‌ಫೈರ್ ಕಾರು ಖರೀದಿಸಿದ್ದಾರೆ.
ಟೋಯೋಟಾ ವೆಲ್‌ಫೈರ್ ಕಾರು ಅತ್ಯಂತ ಜನಪ್ರಿಯ ಕಾರಾಗಿದೆ. ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಹೆಚ್ಚಾಗಿ ಈ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರ ಬೆಲೆ 96.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ವಿಮೆ, ರಿಜಿಸ್ಟ್ರೇಶನ್ ಸೇರಿದಂತೆ ಆನ್ ರೋಡ್ ಬೆಲೆ ಸರಿಸುಮಾರು 1.20 ಕೋಟಿ ರೂಪಾಯಿ.
ಅಂದ ಹಾಗೆ ನೂತನ ಕಾರು ಸರ್ಕಾರದ ಕಾರಲ್ಲ. ಈ ಕಾರನ್ನು ಸಿದ್ದರಾಮಯ್ಯರ ವೈಯಕ್ತಿಕ ಖರೀದಿ ಅನ್ನೋ ಮಾತುಗಳು ಕೇಳಿಬರುತ್ತಿದೆ. ಅದೇನೇ ಆದರೂ ಸಿದ್ದರಾಮಯ್ಯ ಹೊಸ ಕಾರು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. 2ನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಸಿದ್ದರಾಮಯ್ಯನವರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸರ್ಕಾರಿ ಕಾರು ಲಭ್ಯವಾಗಲಿದೆ. ಆದರೆ ಸಿದ್ದು ತಮ್ಮ ದೂರ ಪ್ರಯಾಣದ ಅನುಕೂಲತೆ, ಆರೋಗ್ಯ ದೃಷ್ಟಿಯಿಂದ ಟೋಯೋಟಾ ವೆಲ್‌ಫೈರ್ ಕಾರು ಬಳಸುವ ಸಾಧ್ಯತೆ ಹೆಚ್ಚಿದೆ.