ಸಮಗ್ರ ನ್ಯೂಸ್: ಮೇ 19, ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡರ ಫೋಟೋ ಹೊಂದಿದ್ದ ಬ್ಯಾನರ್’ಗೆ ಚಪ್ಪಲಿ ಹಾರ, ಶ್ರದ್ದಾಂಜಲಿ ಕೋರಿದ್ದ ಬ್ಯಾನರ್ ವಿವಾದದ ಬೆನ್ನಲ್ಲೇ ಪುತ್ತೂರು ಶಾಸಕ ಅಶೋಕ್ ರೈ ಅವರು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ. “ನನ್ನ ಕ್ಷೇತ್ರಕ್ಕೆ ಬಂದರೆ ಹುಷಾರ್” ಎನ್ನುವ ಮಾತಿನಲ್ಲಿ ನಡೆದಿರುವ ವಿವಾದದ ಬಗ್ಗೆ ನಾನೇ ನೋಡಿಕೊಳ್ಳುತ್ತೇನೆ ಎಂದು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
“ಡಿವೈಎಸ್‌ಪಿ ಕಚೇರಿಯಲ್ಲಿ ದೌರ್ಜನ್ಯ ನಡೆಯಲು, ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆಯಾಗಲು ಅಧಿಕಾರಿಗಳಿಗೆ ಬಿಜೆಪಿ ನಾಯಕರ ಒತ್ತಡವೇ ಕಾರಣವಾಗಿದೆ ಎಂದು ಈಗಾಗಲೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾರೆಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದಾರೋ ಅವರ ಹೆಸರನ್ನು ಎರಡು ದಿನದಲ್ಲಿ ಬಹಿರಂಗಪಡಿಸುವೆ” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದ್ದಾರೆ.
ಮತ್ತೊಂದೆಡೆ, ” ಇದು ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲ. ಹಾಗಿರುವಾಗ ಕಾನೂನು ಕಾಪಾಡುವ
ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿಯ ಅಮಾನುಷ ದೌರ್ಜನ್ಯ ಎಸಗಿದ್ದು ಹೇಗೆ ? ಬ್ಯಾನರ್ ಹಾಕಿದ ಆರೋಪಿಗಳಿಗೆ ಹಲ್ಲೆ ನಡೆಸಿದ್ದು ಕಾಂಗ್ರೆಸ್ಸಿನವರೇ” ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಿಸಿದ್ದಾರೆ.
ಕಲ್ಲಡ್ಕ ಭಟ್ರವರ ಆರೋಪಕ್ಕೆ ಖಾರವಾಗಿಯೇ ಶಾಸಕ ಅಶೋಕ್ ರೈ ಉತ್ತರಿಸಿದ್ದಾರೆ. “ನನ್ನ ಕ್ಷೇತ್ರದಲ್ಲಿ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ಅಮಾನತು ಮಾಡುವಂತೆ ಸೂಚಿಸಿದ್ದೆ. ಅದರಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗಿದೆ” ಎಂದು ಶಾಸಕರು ತಿಳಿಸಿದ್ದಾರೆ.
“ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರ ಕಾಲ್ ಲಿಸ್ಟ್ ತೆಗೆದು ಅದನ್ನು ಎರಡು ದಿನದೊಳಗೆ ಬಹಿರಂಗಪಡಿಸುವೆ, ಆವಾಗ ಪುತ್ತೂರಿನ ಜನತೆಗೆ ಎಲ್ಲವೂ ಗೊತ್ತಾಗಲಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಪುತ್ತೂರಿಗೆ ಬಂದು ಈ ವಿಚಾರದಲ್ಲಿ ಮಾತಾಡುವ, ಮೂಗು ತುರಿಸುವ ಅಗತ್ಯವಿಲ್ಲ. ನನ್ನ ಕ್ಷೇತ್ರದಲ್ಲಿ ಆಗಿರುವ ಘಟನೆಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ” ಎಂದು ಅವರು ಹೇಳಿದ್ದಾರೆ.
ಇದೀಗ ಪುತ್ತೂರಿನಲ್ಲಿ ನಡೆಯುತ್ತಿರುವ ಇಡೀ ಘಟನೆಯು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ.