ಸಮಗ್ರ ನ್ಯೂಸ್: ಕರ್ನಾಟಕ ಕಾಂಗ್ರೆಸ್ ನಿಂದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಬಹುತೇಕ ಪೈನಲ್ ಆಗಿದೆ. ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗಾದರೆ ಈವರೆಗೆ ಸಿಎಂ ರೇಸ್ ನಲ್ಲಿದ್ದ ಡಿಕೆಶಿ ಕರಗಿದ್ದು ಹೇಗೆ ಎಂದು ಗೊತ್ತಾದರೆ ನಿಜಕ್ಕೂ ಅಚ್ಚರಿಯಾಗುತ್ತೆ.
ಹೌದು, ದೆಹಲಿಯಲ್ಲಿ ಮುಖ್ಯಮಂತ್ರಿ ಹುದ್ದೆ ತನಗೆ ಬೇಕು ಎಂಬುದಾಗಿ ಸಿಎಂ ರೇಸ್ ನಲ್ಲಿ ಡಿಕೆ ಶಿವಕುಮಾರ್ ಇದ್ದರು. ಕಾಂಗ್ರೆಸ್ ಹೈಕಮಾಂಡ್ ಮನವೊಲಿಕೆಗೂ ಪಟ್ಟು ಸಡಿಸಿರಲಿಲ್ಲ. ಆದರೆ ಅವರಿಗೆ ಬಂದ ಒಂದೇ ಒಂದು ಕರೆಯಿಂದ ಕನಕಪುರದ ಬಂಡೆ ಕರಗಿ ನೀರಾಗಿದ್ದಾರೆ.
ಬುಧವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸಿಎಂ ಆಯ್ಕೆ ಕಸರತ್ತು ನಡೆಸಿದರೂ, ಅಂತಿಮಗೊಂಡಿರಲಿಲ್ಲ. ಡಿಕೆಶಿ, ಸಿದ್ಧು ಮನವೊಲಿಕೆಯಾಗಿರಲಿಲ್ಲ. ಆದರೆ ಸಿಎಂ ಆಯ್ಕೆ ಕಸರತ್ತಿಗೆ ಸೋನಿಯಾ ಗಾಂಧಿ ಎಂಟ್ರಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಹೋಗಿದ್ದ ಸೋನಿಯಾ ಗಾಂಧಿ ಕರ್ನಾಟಕ ಸಿಎಂ ಆಯ್ಕೆ ಸಭೆಗೆ ಹಾಜರಾಗಿರಲಿಲ್ಲ. ಅವರು ಅಲ್ಲಿಂದಲೇ ಬುಧವಾರ ತಡರಾತ್ರಿ ಡಿಕೆ ಶಿವಕುಮಾರ್ ಗೆ ಕರೆ ಮಾಡಿ 2 ವರ್ಷ ಸಿದ್ಧರಾಮಯ್ಯ ಸಿಎಂ ಆಗಿರಲಿದ್ದಾರೆ. ಆ ಬಳಿಕ ಅವರಾಗಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮನವೊಲಿಸಿದ್ದಾರೆ.
ಇಷ್ಟಲ್ಲದೇ ಮುಖ್ಯಮಂತ್ರಿಯಾಗಿ ಇದ್ದುಕೊಂಡೇ ಗೌರವ ವಿದಾಯವನ್ನು ಸಿದ್ಧರಾಮಯ್ಯ ಬಯಸುತ್ತಿದ್ದಾರೆ. ರಾಜಕೀಯ ನಿವೃತ್ತಿಯನ್ನು ಪಡೆಯಬೇಕು ಎಂದುಕೊಂಡಿದ್ದಾರೆ. ಅದಕ್ಕೆ ನೀವು ಅವಕಾಶ ಮಾಡಿಕೊಡಬೇಕು. 2 ವರ್ಷದ ಬಳಿಕ ಸಿದ್ಧರಾಮಯ್ಯ ರಾಜಕೀಯ ನಿವೃತ್ತಿಯಾಗಲಿದ್ದು, ನಿಮ್ಮನ್ನು ಸಿಎಂ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಸೋನಿಯಾ ಗಾಂಧಿಯಿಂದ ಬಂದಂತ ತಡರಾತ್ರಿಯ ಕರೆಗೆ ಡಿಕೆಶಿ ಮನವೊಲಿದಿದ್ದು, 30-30 ತಿಂಗಳ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಕಾಂಗ್ರೇಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಸಿಎಲ್ ಪಿ ನಾಯಕನ ಹೆಸರು ಅಧಿಕೃತ ಘೋಷಣೆಯಾಗಿದೆ.