ಸಮಗ್ರ ನ್ಯೂಸ್: ಶಾಲಾ ಕಾಲೇಜುಗಳ ಹಿಜಾಬ್ ನಿಷೇಧದ ವಿಚಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲಲ್ಲಿದೆ. ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಿ ಆ ಪ್ರಕಾರ ಸಾಮರಸ್ಯ ಕಾಪಾಡುವಂತಹ ನಿರ್ಧಾರವನ್ನು ಹೊಸ ಸರ್ಕಾರ ತೆಗೆದುಕೊಳ್ಳಲಿದೆ’ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಮಂಗಳವಾರ ಮುಸ್ಲೀಮರ ಶೇ 4ರಷ್ಟು ಮೀಸಲಾತಿ ರದ್ದತಿ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ ‘ಈ ವಿಚಾರದಲ್ಲಿ ಹಿಂದಿನ ಸರ್ಕಾರ ದುರುದ್ದೇಶಪೂರಿತ ಹಾಗೂ ರಾಜಕೀಯ ಪ್ರೇರಿತ ನಿರ್ಧಾರ ತೆಗೆದುಕೊಂಡಿದೆ. ಹಿಂದುಳಿದ ವರ್ಗದ ಒಳಮೀಸಲಾತಿ ಜಾರಿಗೆ ತರುವ ವರದಿಯನ್ನು ಪಡೆಯದೆ ಶಾಶ್ವತ ಸ್ಥಾನ ಕಲ್ಪಿಸಲು ಸರ್ಕಾರ ಆದೇಶ ಹೊರಡಿಸಿತ್ತು. ನಂತರ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿತ್ತು. ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ಬಗ್ಗೆಯೂ ಆ ವೇಳೆ ಅವರು ಮಾತನಾಡಿದ್ದಾರೆ. ಅದು ಒಂದು ಸರ್ಕಾರವೇ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಕೇಂದ್ರ ಸರ್ಕಾರದ ನೀಡುವ ಯೋಜನೆಗಳು ರಾಜ್ಯದ ಜನರ ತೆರಿಗೆಯ ಪಾಲು . ಕರ್ನಾಟಕದಿಂದ ಪ್ರತಿ ವರ್ಷ ₹ 1.5 ಲಕ್ಷ ಕೋಟಿಗೂ ಅಧಿಕ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ಅದರಲ್ಲಿ ರಾಜ್ಯಕ್ಕೆ ನೀಡುವುದು ₹42 ಸಾವಿರ ಕೋಟಿ ಮಾತ್ರ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕಾನೂನು ಬದ್ಧವಾಗಿ ಸಿಗಬೇಕಾದ ಪಾಲನ್ನು ನಾವು ಪಡೆದೇ ಪಡೆಯುತ್ತೇವೆ’ ಎಂದು ತಿಳಿಸಿದರು.