Ad Widget .

ಇಂದಿನಿಂದ ರಾಜ್ಯದಲ್ಲಿ ಆನೆಗಣತಿ ಆರಂಭ

ಸಮಗ್ರ ನ್ಯೂಸ್:‌ ದಕ್ಷಿಣದ ರಾಜ್ಯದಲ್ಲಿ ಆನೆಗಣತಿ ಪ್ರಾರಂಭವಾಗಲಿದ್ದು ಇಂದಿನಿಂದ(ಮೇ.17) ಮೂರು ದಿನಗಳವರೆಗೆ ನಡೆಯಲಿದೆ.
ಅಖಿಲ ಭಾರತ ಗಣತಿಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಇನ್ನೂ ಘೋಷಿಸದ ಕಾರಣ ಕರ್ನಾಟಕ ಅರಣ್ಯ ಇಲಾಖೆಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸುವಲ್ಲಿ ಮುಂದಾಳತ್ವ ವಹಿಸಿದೆ.

Ad Widget . Ad Widget .

ಗಣತಿಯು ನೇರ ಮತ್ತು ಪರೋಕ್ಷ ಮೌಲ್ಯಮಾಪನ ವಿಧಾನಗಳನ್ನು ಒಳಗೊಂಡಿದ್ದು, ನೀರಿನ ಹೊಂಡಗಳಲ್ಲಿ ಎಣಿಕೆ, ಸಗಣಿ ವಿಶ್ಲೇಷಣೆ, ಸಸ್ಯವರ್ಗ ಮತ್ತು MoEFCC ಪಟ್ಟಿ ಮಾಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಮಾಧ್ಯನಕ್ಕೆ ತಿಳಿಸಿದರು.

Ad Widget . Ad Widget .

ಗಣತಿಯನ್ನು ಒಂದೇ ಸ್ವರೂಪದಲ್ಲಿ ಮತ್ತು ಅದೇ ಸಮಯದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾದಲ್ಲಿಯೂ ಮಾಡಲಾಗುತ್ತದೆ. ಇದು ಅಲೆದಾಡುವ ಆನೆಗಳ ಸಂಖ್ಯೆಯನ್ನು ತಿಳಿಯಲು ನೆರವಾಗುತ್ತದೆ. ಕರ್ನಾಟಕದ ಆನೆಗಳು ಈ ಎರಡು ರಾಜ್ಯಗಳಲ್ಲಿ ಹೆಚ್ಚಾಗಿ ಅಲೆದಾಡುತ್ತಿರುವ ಕಾರಣ ಮಹಾರಾಷ್ಟ್ರ ಮತ್ತು ಗೋವಾವನ್ನು ಸಹ ಗಣತಿಯ ವ್ಯಾಪ್ತಿಗೆ ತರಲಾಗಿದೆ ಎಂದು ರಂಜನ್ ಹೇಳಿದರು.

ಕರ್ನಾಟಕವು ಆರೋಗ್ಯವಂತ ಹುಲಿ ಮತ್ತು ಆನೆಗಳ ತವರು. ಕಳೆದ ಗಣತಿ ವರದಿಯ ಪ್ರಕಾರ, ಕರ್ನಾಟಕದಲ್ಲಿ 6,000 ಆನೆಗಳಿದ್ದು, ಅರಣ್ಯ ಅಧಿಕಾರಿಗಳು ತಮ್ಮ ನಿರೀಕ್ಷೆಗಳನ್ನು ನಿರ್ದಿಷ್ಟಪಡಿಸದಿದ್ದರೂ, ರಾಜ್ಯವು ಏರಿಕೆಯನ್ನು ದಾಖಲಿಸುವ ನಿರೀಕ್ಷೆಯಲ್ಲಿದೆ.
ಗಣತಿಗಾಗಿ ಎಲ್ಲ ರಾಜ್ಯಗಳ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗಣತಿಯನ್ನು ದಾಖಲಿಸಲಾಗುತ್ತದೆ ಮತ್ತು ಛಾಯಾಚಿತ್ರ ತೆಗೆಯಲಾಗುತ್ತದೆ. ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಸಹ ಬಳಸಲಾಗುತ್ತದೆ. ವರದಿಗಳನ್ನು ಪ್ರತಿದಿನವೂ MoEFCC ಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ನೀಲಗಿರಿ ಜೀವಗೋಳದಲ್ಲಿ ಅತಿ ಹೆಚ್ಚು ಆನೆಗಳು ನೆಲೆಸಿರುವ ನಿರೀಕ್ಷೆಯಿದೆ’ ಎಂದು ಅರಣ್ಯಾಧಿಕಾರಿ ಹೇಳಿದರು.

ಮಾನವ-ಆನೆ ಸಂಘರ್ಷದ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ, ಈ ಬಾರಿ ಮೌಲ್ಯಮಾಪನಕ್ಕೆ ಸ್ವಯಂಸೇವಕರು ಅಥವಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳದಿರಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಿಬ್ಬಂದಿ ಮತ್ತು ಜನರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಂಜನ್ ಹೇಳಿದ್ದಾರೆ.
ಆನೆ ನಡೆವ ದಾರಿಯಲ್ಲಿ:
ಆನೆ ನಮ್ಮ ರಾಷ್ಟ್ರೀಯ ಪಾರಂಪರಿಕ ಪ್ರಾಣಿ. ಮಾನವನಂತೆಯೇ ಆನೆಯೂ ಸಂಘ ಜೀವಿ. ಕಾಡಾನೆಗಳ ಕೌಟುಂಬಿಕ ಬದುಕು ಮಾತೃಪ್ರಧಾನ ವ್ಯವಸ್ಥೆಯಿಂದ ಕೂಡಿದೆ. ಹಿರಿಯ ಹೆಣ್ಣಾನೆಯೇ ಗುಂಪಿನ ಅಧಿನಾಯಕಿ. ಆಕೆಯ ಸೋದರಿ, ಮಕ್ಕಳು ಆ ಕುಟುಂಬದ ಸದಸ್ಯರು. ಹಲವು ಸೋದರ ಸಂಬಂಧಿ ಗುಂಪುಗಳು ಸೇರಿ ಆನೆಯ ವಂಶವೊಂದು ಜನ್ಮ ತಳೆಯುತ್ತದೆ. ಈ ವಂಶದಲ್ಲಿ 60ರಿಂದ 90 ಆನೆಗಳು ಇರುತ್ತವೆ. ಸದಾಕಾಲ ಚಲಿಸುವುದೇ ಅವುಗಳ ವಿಶಿಷ್ಟ ಗುಣ. ಮರಿಗಳ ಲಾಲನೆ, ಪಾಲನೆ ಮಾಡುವುದು ಚಿಕ್ಕಮ್ಮ ಆನೆಯ ಕೆಲಸ. ಮನುಷ್ಯರಂತೆ ಆನೆಗಳಲ್ಲೂ ಗಂಡು ಕೊಂಚ ಪುಂಡು ಧೋರಣೆ ಹೊಂದಿರುತ್ತವೆ. ಗಂಡಾನೆ ಮರಿಗಳು ಮಾತೃಪ್ರಧಾನ ವ್ಯವಸ್ಥೆಯ ನೀತಿ–ನಿಯಮ ಪಾಲಿಸುವುದಿಲ್ಲ. ಸುಮಾರು 10 ವರ್ಷ ಪ್ರಾಯ ತಲುಪುವ ವೇಳೆಗೆ ಅವುಗಳು ಅಮ್ಮ, ಚಿಕ್ಕಮ್ಮನ ಅಕ್ಕರೆ ಕಳೆದುಕೊಂಡು ಗುಂಪಿನಿಂದ ಹೊರದೂಡಲ್ಪಡುತ್ತವೆ. ಹವಾಮಾನ ವೈಪರೀತ್ಯ ಹಾಗೂ ನೈಸರ್ಗಿಕವಾಗಿ ಕಾಡುವ ರೋಗಗಳಿಂದ ಪಾರಾಗಿ ಬದುಕುಳಿಯಲು ಸದೃಢ ತಳಿಗಳು ಅತಿಮುಖ್ಯ. ಇಂಥ ಸಂದರ್ಭದಲ್ಲಿ ವನ್ಯಜೀವಿಗಳು ಕಾಡಿನಿಂದ ಇನ್ನೊಂದು ಕಾಡಿಗೆ ತೆರಳಲು ಸಂಪರ್ಕ ದಾರಿಗಳು ಇರಬೇಕು. ಈ ಸಂಪರ್ಕ ದಾರಿಗಳು ನಾಶವಾದರೆ ಅಥವಾ ಅವುಗಳಲ್ಲಿ ಅಡೆತಡೆ ಉಂಟಾದರೆ ಜೀವಿಗಳು ತಮ್ಮ ತಳಿ ವೈವಿಧ್ಯವನ್ನು ಕಳೆದುಕೊಳ್ಳುತ್ತವೆ. ಆ ಕಾರಣದಿಂದಲೇ ‘ಕಾರಿಡಾರ್‌’ಗಳು ವನ್ಯಜೀವಿಗಳ ವಂಶಾಭಿವೃದ್ಧಿಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಹರಿದು -ಹಂಚಿಹೋಗಿರುವ ಕಾಡುಪ್ರಾಣಿಗಳ ಆವಾಸಗಳನ್ನು ಒಗ್ಗೂಡಿಸಲು, ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಡೆಗಟ್ಟುವಲ್ಲಿ ಕಾರಿಡಾರ್‌ಗಳು ಮಹತ್ವದ ಪಾತ್ರವಹಿಸುತ್ತವೆ. ಆದರೆ, ಪ್ರಸ್ತುತ ಈ ಕಾರಿಡಾರ್‌ಗಳು ಅನೇಕ ಕಾರಣಗಳಿಂದಾಗಿ ತುಂಡುತುಂಡಾಗುತ್ತಿವೆ. ಆನೆ ಅಪಾಯದ ಅಂಚಿನಲ್ಲಿರುವ ಜೀವಿ. ಕಾಡಾನೆಗಳ ಸಂರಕ್ಷಣೆಯಲ್ಲಿ ಈ ಮೊಗಸಾಲೆಗಳದ್ದು ಪ್ರಧಾನ ಪಾತ್ರ. ಋತುಮಾನಕ್ಕೆ ಅನುಗುಣವಾಗಿ ನೀರು, ನೆರಳು, ಆಹಾರ, ಸಂತಾನೋತ್ಪತ್ತಿಗಾಗಿ ಅರಣ್ಯದಿಂದ ಮತ್ತೊಂದು ಅರಣ್ಯಕ್ಕೆ ಸಾಗಲು ‘ಆನೆ ಪಥ’ ಮಹತ್ವಪೂರ್ಣ ಪಾತ್ರವಹಿಸುತ್ತದೆ. ಇವತ್ತಿನ ಪರಿಸ್ಥಿತಿ ನೋಡಿ– ಅಭಿವೃದ್ಧಿ ಹೆಸರಿನಲ್ಲಿ ‘ಆನೆ ಮೊಗಸಾಲೆ’ಗಳು ಹರಿದು ಹಂಚಿಹೋಗಿವೆ. ಕೆಲವೆಡೆ ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಿವೆ. ಸಂತ್ರಸ್ತರಿಗೆ ಪುನರ್ವಸತಿ, ಅರಣ್ಯ ನಾಶ, ಒತ್ತುವರಿ– ಈ ಎಲ್ಲದರ ಪರಿಣಾಮ ‘ಆನೆ ಪಥ’ಗಳು ನಲುಗಿವೆ. ಆನೆಗಳು ಸಾಗುವ ಹಾದಿಯಲ್ಲಿ ಅಕ್ರಮ ಗಣಿಗಾರಿಕೆ, ಹೆದ್ದಾರಿಗಳ ನಿರ್ಮಾಣ, ಜಾನುವಾರು ಸಾಕಾಣಿಕೆ, ಗ್ರಾಮೀಣರಿಂದ ಸೌದೆ, ಸೊಪ್ಪು ಸಂಗ್ರಹ– ಹೀಗೆ ಕಾರಿಡಾರ್‌ಗಳ ರೂಪುರೇಷೆ ವ್ಯತ್ಯಯವಾಗಲು ಕಾರಣ ಒಂದೆರಡಲ್ಲ.

ಅವೈಜ್ಞಾನಿಕ ನೀತಿ:
ಆನೆಗಳ ಕಾರಿಡಾರ್‌ ವ್ಯಾಪ್ತಿಯಲ್ಲಿ ಶ್ರೀಮಂತರ ವೈಭವೋಪೇತ ಬದುಕಿಗಾಗಿ ರೆಸಾರ್ಟ್‌, ಹೋಂ ಸ್ಟೇಗಳು ತಲೆಎತ್ತಿವೆ. ಪರಿಸರ ಪ್ರವಾಸೋದ್ಯಮದ (ಎಕೊ ಟೂರಿಸಂ) ಹೆಸರಿನಲ್ಲಿ ರೂಪುಗೊಂಡಿರುವ ಅವೈಜ್ಞಾನಿಕ ನೀತಿಗಳಿಂದ ಕಾರಿಡಾರ್‌ಗಳಿಗೆ ದೊಡ್ಡ ಅಪಾಯ ಎದುರಾಗಿದೆ. ಆನೆಗಳ ದಾರಿಯ ಸುತ್ತಮುತ್ತ ಜನವಸತಿ ಪ್ರದೇಶಗಳೂ ಹೆಚ್ಚುತ್ತಿವೆ. ಅವೈಜ್ಞಾನಿಕವಾದ ಬೇಸಾಯ ಚಟುವಟಿಕೆ ಮಿತಿಮೀರಿದೆ. ಅತಿಕ್ರಮಣಕಾರಿ ಸಸ್ಯಪ್ರಭೇದಗಳಿಂದ ಮರಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಆಹಾರ ಸರಪಳಿ ತಂಡಾಗಿ ಆನೆಗಳು ದಿಕ್ಕುತಪ್ಪುತ್ತಿವೆ. ಕಾಡಂಚಿನ ಪ್ರದೇಶ, ಕಾಯ್ದಿಟ್ಟ ಅರಣ್ಯ, ಕಂದಾಯ ಇಲಾಖೆಗೆ ಸೇರಿದ ವಿವಿಧ ಬಗೆಯ ಕಾಡು ಅರಣ್ಯದ ವ್ಯಾಪ್ತಿಗೆ ಸೇರಿಲ್ಲ. ಮತ್ತೊಂದೆಡೆ ಆನೆ ಪಥಗಳು ವಾಣಿಜ್ಯ ಚಟುವಟಿಕೆಗಳಿಗೆ ಸದ್ದಿಲ್ಲದೆ ಬಳಕೆಯಾಗುತ್ತಿವೆ. ಹೀಗಾಗಿ, ಅರಣ್ಯ ಮತ್ತು ಆನೆ ಮೊಗಸಾಲೆಗಳ ನಡುವಿನ ಸಂಪರ್ಕದ ಕೊಂಡಿ ಕಳಚಿದೆ. ಇದರಿಂದ ಮಾನವ ಮತ್ತು ಆನೆಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಈ ಸಂಘರ್ಷದಲ್ಲಿ ಪ್ರತಿವರ್ಷ ಸುಮಾರು 50 ಆನೆಗಳು ಹಾಗೂ 200 ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಂದಹಾಗೆ, ಈ ‘ಆನೆ ಕಾರಿಡಾರ್‌’ಗಳನ್ನು ಕೇವಲ ಕಾಡಾನೆಗಳು ಮಾತ್ರ ಬಳಸುವುದಿಲ್ಲ. ಹುಲಿ, ಚಿರತೆ, ಕರಡಿ, ಜಿಂಕೆ, ಕಾಡೆಮ್ಮ, ಕೆನ್ನಾಯಿಗಳೂ ಬಳಸುತ್ತವೆ. ಹೀಗಿದ್ದರೂ, ಕಾರಿಡಾರ್‌ಗಳ ಸಂರಕ್ಷಣೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತಿಲ್ಲ.

ಆನೆಗಳ ಭವಿಷ್ಯ:
ಆನೆ ಗಣತಿ ಪ್ರಕಾರ ಭಾರತದಲ್ಲಿ ಸುಮಾರು 26 ಸಾವಿರ ಆನೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ದಕ್ಷಿಣ ಭಾರತದಲ್ಲಿ ಸುಮಾರು 12 ಸಾವಿರ ಕಾಡಾನೆಗಳಿವೆ. ಕರ್ನಾಟಕದಲ್ಲಿಯೇ 6 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಪ್ರತಿದಿನ ಆನೆಯೊಂದು ಪ್ರತಿದಿನ 150ರಿಂದ 200 ಕೆಜಿಯಷ್ಟು ಮೇವು ತಿನ್ನುತ್ತದೆ. ಅದಕ್ಕೆ 200 ಲೀಟರ್‌ಗಳಷ್ಟು ನೀರು ಬೇಕು. ಆನೆಯೊಂದು ಸಂಚರಿಸಲು 450ರಿಂದ 500 ಚ.ಕಿ.ಮೀ. ಅರಣ್ಯ ಪ್ರದೇಶ ಅತ್ಯಾವಶ್ಯಕ. ಕರ್ನಾಟಕದಲ್ಲಿ ಸರ್ಕಾರದ ಅಧಿಕೃತ ದಾಖಲೆ ಪ್ರಕಾರವೇ 67 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ತಮ್ಮ ಆವಾಸ ಸ್ಥಾನದಲ್ಲಿ ಮಾನವ ನಿರ್ಮಿತ ಒತ್ತಡಗಳಿಂದ ನೆರಳು, ಮೇವಿಗಾಗಿ ಹಾದಿ ತಪ್ಪುವ ಆನೆಗಳು ಕಾಡಿನಿಂದ ನಗರ, ಪಟ್ಟಣ, ಜನವಸತಿ ಹಳ್ಳಿಗಳತ್ತ ನುಗ್ಗುತ್ತವೆ. ಇದರಿಂದ ಮನುಷ್ಯ ಮತ್ತು ಆನೆಗಳ ನಡುವೆ ಸಂಘರ್ಷ ಹೆಚ್ಚುತ್ತಿದೆ. ಸಂಘರ್ಷವು ಇಬ್ಬರಲ್ಲಿ ಒಬ್ಬರ ಸಾವಿನೊಂದಿಗೆ ಅಂತ್ಯ ಕಾಣುತ್ತಿರುವುದು ದುರಂತ. ಪರಿಸರ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ (ಐಯುಸಿಎನ್) ಪ್ರಕಟಿಸಿರುವ ವರದಿ ಪ್ರಕಾರ ಆನೆಯು ಅಪಾಯದ ಅಂಚಿನಲ್ಲಿರುವ ಜೀವಿ. ವಿದ್ಯುತ್‌ ಸ್ಪರ್ಶ, ದಂತಕ್ಕಾಗಿ ಆನೆ ಹತ್ಯೆಯಂತಹ ಕೃತ್ಯಗಳು ಮುಂದುವರಿದರೆ ಅಳಿವಿನಂಚಿಗೆ ಸಾಗಿ ಭವಿಷ್ಯದಲ್ಲಿ ನಶಿಸಿಹೋದರೂ ಸೋಜಿಗಪಡಬೇಕಿಲ್ಲ.

Leave a Comment

Your email address will not be published. Required fields are marked *