ಸಮಗ್ರ ನ್ಯೂಸ್: ಸುಳ್ಯ ಮಂಡಲ ಭಾರತೀಯ ಜನತಾ ಪಾರ್ಟಿ ವತಿಯಿಂದ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಅಭಿನಂದನಾ ಸಭೆ ಸುಳ್ಯದ ಬೂಡು ಕೇರ್ಪಳ ಬಂಟರ ಭವನದಲ್ಲಿ ಮಂಗಳವಾರ ನಡೆಯಿತು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯದ ಭಾಗೀರಥಿ ಮುರುಳ್ಯ ಅವರು ಬಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸುಳ್ಯ ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಲಾಗಿದೆ ಎಂದರು.
ಸುಳ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಎಸ್.ಅಂಗಾರ ಅವರ ಸಜ್ಜನ ರಾಜಕರಣ, ಅಭಿವೃದ್ಧಿ ಗೆಲುವಿಗೆ ಕಾರಣವಾಗಿದೆ. ರಾಜ್ಯದ ಸೋಲಿನಿಂದ ಕಾರ್ಯಕರ್ತರು ವಿಚಲಿತರಾಗುವುದು ಬೇಡ. ಮುಂದೆ ಬಿಜೆಪಿ ವಿರೋಧ ಪಕ್ಷವಾಗಿ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ಅಭಿವೃದ್ಧಿಗೆ ಕೈಜೋಡಿಸಲಿದೆ. ಸುಳ್ಯದಲ್ಲಿ ಸಾಮಾನ್ಯ ಕುಟುಂಬದಿಂದ ಬಂದ ಮಹಿಳೆ ವಿಧಾನ ಸಭೆ ಪ್ರವೇಶಿಸುತ್ತಿರುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ಸುಳ್ಯದಲ್ಲಿ ಸತತ ಏಳು ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಸುಳ್ಯ ಬಿಜೆಪಿಯ ಕ್ಷೇತ್ರ, ಬಿಜೆಪಿಯ ಭದ್ರಕೋಟೆ ಎಂದಾಗಿದೆ ಎಂದರು.
ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ಪ್ರಮುಖರಾದ ರಾಧಾಕೃಷ್ಣ ಬೂಡಿಯೂರು, ಆಶಾ ತಿಮ್ಮಪ್ಪ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಸುಭೋದ್ ಶೆಟ್ಟಿ ಮೇನಾಲ, ಎಸ್.ಎನ್.ಮನ್ಮಥ, ಗುರುದತ್ ನಾಯಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎ.ವಿ.ತೀರ್ಥರಾಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿನಯಕುಮಾರ್ ಕಂದಡ್ಕ ವಂದೇ ಮಾತರಂ ಹಾಡಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು, ಮುಖಂಡರು, ವಿವಿಧ ಪದಾಧಿಕಾರಿಗಳು, ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಿಗೆ ಶಾಲು ಹಾಕಿ ಗೌರವಿಸುವ ಮೂಲಕ ಸುಳ್ಯ ಕ್ಷೇತ್ರದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನೂ ಹಲವರು ಅಭಿನಂದಿಸಿ, ಗೌರವಿಸಿ, ಸನ್ಮಾನಿಸಲಾಯಿತು.