ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್‌ನ ಪ್ರಥಮ ಎರಡೂವರೆ ವರ್ಷದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಗೊಳ್ಳಬೇಕಿದೆ.
ಸುಳ್ಯ ನಗರ ಪಂಚಾಯತ್‌ನ ಪ್ರಥಮ ಅವಧಿಯ ಎರಡೂವರೆ ವರ್ಷದಲ್ಲಿ ವಿನಯಕುಮಾರ್ ಕಂದಡ್ಕ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪೆಲತಡ್ಕ ಕಾರ್ಯನಿರ್ವಹಿಸಿದ್ದರು. ಮೇ ೫ಕ್ಕೆ ಅವರ ಅಧಿಕಾರವಧಿ ಮುಕ್ತಾಯಗೊಂಡಿದೆ.
ಮುಂದಿನ ನ.ಪಂ.ನ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗುವಲ್ಲಿವರೆಗೆ ಆಡಳಿತ ನೋಡಿಕೊಳ್ಳಲು ಆಡಳಿತಾಧಿಕಾರಿ ನೇಮಕಗೊಳ್ಳಬೇಕಿದ್ದು, ಶೀಘ್ರ ನೇಮಕವಾಗುವ ನಿರೀಕ್ಷೆಯಿದೆ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ತಹಶೀಲ್ದಾರ್ ಆಡಳಿತಾಧಿಕಾರಿಯಾಗಿ ನೇಮಕಗೊಳ್ಳುವ ನಿರೀಕ್ಷೆ ಇದೆ.
ಸುಳ್ಯ ನಗರ ಪಂಚಾಯತ್‌ನ ೨೦ ಸದಸ್ಯ ಸ್ಥಾನಗಳಿಗೆ ೨೦೧೯ರಲ್ಲಿ ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ ೧೪ ಬಿಜೆಪಿ, ೪ ಕಾಂಗ್ರೆಸ್ ಹಾಗೂ ೨ ಪಕ್ಷೇತರ ಸದಸ್ಯರು ಚುನಾಯಿತರಾಗಿದ್ದರು. ಚುನಾವಣೆ ನಡೆದು ಒಂದುವರೆ ವರ್ಷಕ್ಕೂ ಅಧಿಕ ಸಮಯ ಜನಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿರಲಿಲ್ಲ. ೨೦೨೦ರ ನವೆಂಬರ್‌ನಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಅಧ್ಯಕ್ಷರಾಗಿ ವಿನಯ ಕುಮಾರ್ ಕಂದಡ್ಕ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪೆಲತ್ತಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದರು.