ಸಮಗ್ರ ನ್ಯೂಸ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ 9ನೇ ಬಾರಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದು ಬಳಿಕ ಸೋತಿದ್ದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ರಮಾನಾಥ ರೈ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಕರಾವಳಿಯ ಕಾಂಗ್ರೆಸ್ ರಾಜಕಾರಣದ ಹಿರಿತಲೆಯೊಂದು ನೇಪಥ್ಯಕ್ಕೆ ಸರಿದಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ವಯಸ್ಸಿನ ಕಾರಣಕ್ಕಾಗಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಆದರೆ ಪಕ್ಷದ ಪರ ಕೆಲಸ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.
ನನ್ನ ವಯಸ್ಸಿನ ಕಾರಣದಿಂದ ಚುನಾವಣಾ ಸ್ಪರ್ಧೆಗೆ ಪಕ್ಷದ ಒಳಗಿಂದಲೇ ವಿರೋಧವಿದ್ದು, ಹಾಗಾಗಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷದ ಹೈಕಮಾಂಡ್ ಮೇಲೆ ಗೌರವವಿದ್ದು ಪಕ್ಷಕ್ಕಾಗಿ ಶ್ರಮಿಸುವುದಾಗಿ ಹಿರಿಯ ರಾಜಕಾರಣಿ ರಮಾನಾಥ ರೈ ಅವರು ಹೇಳಿದರು.
ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ರಮಾನಾಥ ರೈ ಅವರು, ತಮ್ಮ ವಿರುದ್ಧ ಅಪಪ್ರಚಾರ ಮಾಡಿ ಸೋಲಿಸಿದರು ಎಂದು ಹೇಳುತ್ತಾ ಬಂದಿದ್ದಲ್ಲದೆ, ಹಾಗೇ ಆರೋಪ ಮಾಡಿದವರು ಸಾಬೀತುಪಡಿಸಿ ಎಂದು ಹಲವು ದೈವಗಳ ಮುಂದೆ ಆಣೆ ಪ್ರಮಾಣಕ್ಕೆ ಕರೆದು ಸವಾಲೊಡ್ಡಿದ್ದರು. ಅಲ್ಲದೆ, ಇದೇ ತಮ್ಮ ಕೊನೇ ಚುನಾವಣೆ ಎಂಬ ಭಾವನಾತ್ಮಕ ಮಾತುಗಳನ್ನು ಆಡಿದ್ದರೂ ಗೆಲುವಿನ ಮೇಲೆ ಪರಿಣಾಮ ಬೀರಿರಲಿಲ್ಲ. ಅವರು 85042 ಮತಗಳನ್ನು ಪಡೆದುಕೊಂಡಿದ್ದರು.