ಸಮಗ್ರ ನ್ಯೂಸ್:ಕೋಣಾಜೆಯ ಬೋಳಿಯಾರ್ ನ ಕುಚುಗುಡ್ಡೆಯಲ್ಲಿ ಮಗಳ ಮದುವೆಯ ದಿನದಂದೇ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೇ 15 ರಂದು ಮುಂಜಾನೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ ಬೋಳಿಯಾರ್ ನ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ(60) ಅವರಾಗಿದ್ದಾರೆ.
ಹಸನಬ್ಬ ಅವರ ಮಗಳಿಗೆ ಕಾಸರಗೋಡಿನ ಯುವಕನೊಂದಿಗೆ ಸೋಮವಾರದಂದು ಹೊಸಂಗಡಿಯ ಸಭಾಂಗಣವೊಂದರಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ.
ಇವರು ಕುಕ್ಕೋಟ್ಟು ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರಿಗೆ ಎರಡು ಗಂಡು ಹಾಗೂ ನಾಲ್ಕು ಪುತ್ರಿಯರಿದ್ದಾರೆ. ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮ ರದ್ದುಗೊಳಿಸಸಲಾಗಿತ್ತು ಹಾಗೂ ಎರಡು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಸಂಜೆಯ ವೇಳೆಗೆ ವರನ ಮನೆಯಲ್ಲಿ ಸರಳವಾಗಿ ನಿಖಾ ನೆರವೇರಿದೆ ಎಂದು ತಿಳಿದು ಬಂದಿದೆ.