ಸಮಗ್ರ ನ್ಯೂಸ್: ಸುಮಾರು 50 ವರ್ಷಗಳ ಬಳಿಕ ಸುಳ್ಯ ತಾಲೂಕಿನ ಕೋಲ್ಚಾರಿನಲ್ಲಿರುವ ಕೋಲ್ಚಾರು ತರವಾಡು ವಯನಾಟ್ ಕುಲವನ್ ದೇವಸ್ಥಾನದಲ್ಲಿ ನಡೆಯಲಿರುವ ದೈವಂಕಟ್ಟು ಮಹೋತ್ಸವಕ್ಕೆ ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ.

ಸುಮಾರು 15ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಸೇರುವ ಈ ಕಾರ್ಯಕ್ರಮಕ್ಕೆ ಇಡೀ ಕೋಲ್ಚಾರು ಗ್ರಾಮ ಸಜ್ಜಾಗಿದೆ. ಗ್ರಾಮದಲ್ಲಿ ಕೇಸರಿ ರಂಗು ಕಣ್ಮನ ಸೆಳೆಯುತ್ತಿದ್ದು, ಭಕ್ತರನ್ನು ಸ್ವಾಗತಿಸಲು ತಯಾರಾಗಿ ನಿಂತಿದೆ.
ಶ್ರೀ ವಯನಾಟ್ ಕುಲವನ್ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳನ್ನು ಅಲಂಕರಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳು ಮತ್ತು ಕೋಲ್ಚಾರು ತರವಾಡು ಮನೆತನದ ಕುಟುಂಬಸ್ಥರು ಕಳೆದ ಕೆಲ ತಿಂಗಳಿನಿಂದ ಅವಿರತ ಶ್ರಮ ವಹಿಸಿ ದುಡಿಯುತ್ತಿದ್ದಾರೆ.

ವಿಶಾಲ ಭೋಜನ ಶಾಕೆ, ದೈವಂಕಟ್ಟು ಮಹೋತ್ಸವ ಅಂಗಣ, ಚಪ್ಪರ ಇತ್ಯಾದಿಗಳನ್ನು ಅದ್ದೂರಿಯಾಗಿ ನಿರ್ಮಿಸಲಾಗಿದ್ದು, ಇದೇ ಮೇ.16ರಿಂದ 18ರವರೆಗೆ ನಡೆಯಲಿರುವ ಮೂರು ದಿನಗಳ ನಿರಂತರ ಕಾರ್ಯಕ್ರಮಕ್ಕೆ ಸಿದ್ದತೆಗಳು ಭರದಿಂದ ಸಾಗುತ್ತಿವೆ.

ಮೇ. 16ರಂದು ಹಸಿರುವಾಣಿ, ಉಗ್ರಾಣ ಮುಹೂರ್ತ ನಡೆದ ಬಳಿಕ ನಿರಂತರ ಮೂರು ದಿನ ವಿವಿಧ ವೈದಿಕ, ದೈವೀ ಕಾರ್ಯಕ್ರಮಗಳು ನಡೆಯಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾಗುವಂತೆ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.