ಸಮಗ್ರ ನ್ಯೂಸ್: ಆಂಧ್ರ ಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸುಮಾರು 13 ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ.
ಲಾರಿ ಮತ್ತು ತೂಫಾನ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಏಳು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಂಡಾಪುರಂ ತಾಲೂಕಿನ ಚಿತ್ರಾವತಿ ಸೇತುವೆ ಬಳಿ ಇಂದು ಘಟನೆ ನಡೆದಿದೆ. ಕಾಕಿನಾಡ ಜಿಲ್ಲೆಯಲ್ಲಿ ಆಟೋ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿಯಾಗಿ ಆರು ಮಂದಿ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ತಾಡಿಪತ್ರಿ ಭಾಗದ ಜನರು ತೂಫಾನ್ ವಾಹನದಲ್ಲಿ ತಿರುಪತಿ ತಿರುಮಲ ಸ್ವಾಮಿಯ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ ಅಪಘಾತವಾಗಿದೆ. ತಾಡಪತ್ರಿ ಕಡೆಯಿಂದ ಬಂದ ಲಾರಿ ಅತಿವೇಗದಲ್ಲಿ ಸಂಚರಿಸುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರು. ಗಂಭೀರ ಗಾಯಗೊಂಡವರನ್ನು ತಾಡಪತ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಒಂದು ಮಗು ಮತ್ತು ಮಹಿಳೆಯರು ಸೇರಿ 6 ಜನರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬಲೋದಬಜಾರ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ರಸ್ತೆ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ.
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ಸಂಭವಿಸಿದ ಅಪಘಾತದಲ್ಲಿ ಪಿಕಪ್ ವಾಹನಕ್ಕೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆಯಿತು. ಭಾನುವಾರ ರಾತ್ರಿ 10:30ಕ್ಕೆ ಪಲಾರಿಯಿಂದ 6 ಕಿ.ಮೀ ದೂರದಲ್ಲಿರುವ ಗೊಂಡ ಪುಲಿಯಾ ಗ್ರಾಮದ ಬಳಿ ಅಪಘಾತ ನಡೆದಿದೆ.
12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.