ಸಮಗ್ರ ನ್ಯೂಸ್: ಮಂಗಳೂರು ಹೊರ ವಲಯದಲ್ಲಿ ಭೀಕರ ದುರಂತ ಸಂಭವಿಸಿದೆ. ಗೂಡ್ಸ್ ರೈಲಿನಡಿ ಸಿಲುಕಿ 17 ಎಮ್ಮೆಗಳು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಭಾನುವಾರ ತಡರಾತ್ರಿ ಸುಮಾರು 12 ಗಂಟೆಯಲ್ಲಿ ಮಂಗಳೂರು ಹೊರವಲಯದ ಜೋಕಟ್ಟೆ ಅಂಗರಗುಂಡಿ ಬಳಿ ರೈಲಿನಡಿ ಸಿಲುಕಿ 17 ಎಮ್ಮೆಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಗೂಡ್ಸ್ ರೈಲು ಸಾಗುವ ಸಂದರ್ಭ ಹಾರ್ನ್ ಶಬ್ದವೂ ಎಮ್ಮೆಗಳಿಗೆ ಕೇಳಿಸಿಲ್ಲವೋ ಅಥವಾ ಕೇಳಿಸುವ ಹೊತ್ತಿನಲ್ಲಿ ರೈಲು ಹಾಯ್ದು ಹೋಯಿತೋ ತಿಳಿದುಬಂದಿಲ್ಲ. ಆದರೆ ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆಗೆ ರಾತ್ರಿ ಹೋಗುತ್ತಿದ್ದ ಗೂಡ್ಸ್ ರೈಲಿನಡಿ ಎಮ್ಮೆಗಳು ಸಿಲುಕಿದ ಪರಿಣಾಮ ಈ ದುರಂತ ಸಂಭವಿಸಿದೆ.
ಸಾಮಾನ್ಯವಾಗಿ ಈ ಭಾಗದಲ್ಲಿ ರೈಲ್ವೆ ಟ್ರ್ಯಾಕ್ ಬಳಿ ನೀರು ನಿಲ್ಲುತ್ತದೆ. ಮಳೆ ಬಂದ ಕಾರಣ ಹಾಗೂ ಅಲ್ಲಿ ಬೇರೆ ಬೇರೆ ಕಾರಣಗಳಿಂದ ನೀರು ಸಂಗ್ರಹವಾಗುವ ಹಿನ್ನೆಲೆಯಲ್ಲಿ ಎಮ್ಮೆಗಳು ಗುಂಪುಗೂಡಿ ರೈಲ್ವೆ ಮಾರ್ಗದ ಬಳಿ ನಿಲ್ಲುತ್ತವೆ. ಕಳೆದ ವರ್ಷವೂ ಇದೇ ರೀತಿ ದುರ್ಘಟನೆ ಸಂಭವಿಸಿ, ನಾಲ್ಕೈದು ಎಮ್ಮೆಗಳು ಸಾವನ್ನಪ್ಪಿದ್ದವು. ರೈಲು ಸಾಗುವ ಸಂದರ್ಭ ಹಾರ್ನ್ ಹಾಕಿದರೂ ಎಮ್ಮೆಗಳು ಓಡಲಾರದ ಸ್ಥಿತಿಗೆ ತಲುಪುತ್ತವೆ.