ಸಮಗ್ರ ನ್ಯೂಸ್: ಮಂಗಳೂರು ನಗರದ ಕದ್ರಿ ಮಂಜುನಾಥ ದೇವಸ್ಥಾನದ ಅಂಗಣಕ್ಕೆ ಮೂವರು ಯುವಕರು ಬೈಕಿನಲ್ಲಿ ಗುರುವಾರ ರಾತ್ರಿ ಪ್ರವೇಶಿಸಿದ್ದು, ಅವರನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಯುವಕರು ಮಾತನಾಡಿರುವ ವಿಡಿಯೊವನ್ನು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಬಳಗದ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಅದರಲ್ಲಿ, ಯುವಕರು ತಮ್ಮನ್ನು ಮುಸ್ಲಿಮರೆಂದೂ ಅಸೈಗೋಳಿಯವರು ಎಂದೂ ಹೇಳಿಕೊಂಡಿದ್ದಾರೆ.
‘ಕಾಟಿಪಳ್ಳಕ್ಕೆ ಹೊರಟ ತಾವು ಜಿಪಿಎಸ್ ಹಾಕಿಕೊಂಡು ಬೈಕಿನಲ್ಲಿ ಹೋಗುತ್ತಿದ್ದೆವು. ದಾರಿ ತಪ್ಪಿ ಇಲ್ಲಿಗೆ ಬಂದೆವು’ ಎಂದೂ ಹೇಳಿಕೊಂಡಿದ್ದಾರೆ. ‘ದೇವಸ್ಥಾನ ಅಂಗಣದಲ್ಲಿ ಯುವಕರು ಸಂಶಯಾಸ್ಪದವಾಗಿ ತಿರುಗುತ್ತಿದ್ದರು. ಈ ಯುವಕರು ದೇವಸ್ಥಾನದ ಪ್ರಾಂಗಣಕ್ಕೆ ಬೈಕ್ ತಂದಿದ್ದಾರೆ. ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದರು’ ಎಂದು ಬಜರಂಗದಳವರು ಆರೋಪಿಸಿದ್ದಾರೆ.
ವಿಷಯ ತಿಳಿದು ಸ್ಥಳೀಯರು ದೇವಸ್ಥಾನದ ಬಳಿ ಸೇರಿದ್ದು ಅವರನ್ನು ಪೊಲೀಸರು ಹೊರಗೆ ಕಳುಹಿಸಿದ್ದರು.
ಈ ದೇವಸ್ಥಾನಕ್ಕೆ ಭಯೋತ್ಪಾದಕರ ದಾಳಿ ನಡೆಯುವ ಶಂಕೆ ಇದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ತನಿಖೆಗೆ ಒಳಪಡಿಸಬೇಕು ಎಂದು ಬಜರಂಗದಳ ಆಗ್ರಹಿಸಿದೆ.