Ad Widget .

ಬೆರಳಿಗೆ ಹಚ್ಚುವ ಚುನಾವಣಾ ಶಾಯಿಯ ಇತಿಹಾಸ ಗೊತ್ತೇ? 35 ದೇಶಗಳಿಗೆ ರಪ್ತಾಗುತ್ತಿದೆ ನಮ್ಮ ರಾಯಲ್ ಶಾಯಿ!!

ಸಮಗ್ರ ನ್ಯೂಸ್: ಪ್ರತಿಯೊಬ್ಬರೂ ತಾವು ಮತದಾನ ಮಾಡಿದ ಮೇಲೆ ತಮ್ಮ ಕೈಯ ತೋರು ಬೆರಳನ್ನು ಏಕೆ ತೋರಿಸುತ್ತಿದ್ದಾರೆ ಎಂಬ ಸಂದೇಹ ಚಿಕ್ಕ ಮಕ್ಕಳಲ್ಲಿ ಮೂಡಿದರೂ ದೊಡ್ಡವರಾದವರಿಗೆ ಈ ಬಗ್ಗೆ ಸಹಜವಾಗಿ ಗೊತ್ತೇ ಇರುತ್ತದೆ.

Ad Widget . Ad Widget .

ಹೌದು, ವ್ಯಕ್ತಿಯೊಬ್ಬನಿಗೆ ಸಾಂವಿಧಾನಿಕವಾಗಿ ಬಂದಿರುವ ಮತದಾನದ ಹಕ್ಕನ್ನು ಅವನು ಚಲಾಯಿಸಿದ್ದಾನೆ ಎಂಬುದನ್ನು ಸೂಚಿಸುವ ಹಾಗೂ ಒಂದೇ ಬಾರಿ ಮಾಡಬೇಕಾಗಿರುವ ತನ್ನ ಸರಿಯಾದ ಹಕ್ಕನ್ನು ಚಲಾಯಿಸಿದ್ದಾನೆ ಎಂದು ಖಾತರಿಪಡಿಸುವ ಸಂಕೇತವಾಗಿ ಅವನ/ಅವಳ ಕೈಯ ತೋರು ಬೆರಳಿಗೆ ಸುಲಭವಾಗಿ ಅಳಿಸಲಾಗದಂತಹ ಒಂದು ಶಾಯಿಯ ಗುರುತನ್ನು ಹಾಕಿರುತ್ತಾರೆ.

Ad Widget . Ad Widget .

ಪ್ರತಿ ವ್ಯಕ್ತಿ ತಾನು ಮತದಾನ ಮಾಡಿದ ನಂತರ ಅದರ ಪುರಾವೆಯಾಗಿ ತನ್ನ ತೋರು ಬೆರಳನ್ನು ತೋರಿಸುವ ಪ್ರತೀತಿ ಬಂದಿದೆ ಎನ್ನಬಹುದು. ಅಷ್ಟಕ್ಕೂ ಈ ಶಾಯಿಯ ಕಲ್ಪನೆ ಬಂದಿದ್ದಾದರೂ ಹೇಗೆ ಹಾಗೂ ಅದನ್ನು ಯಾರು ಉತ್ಪಾದಿಸುತ್ತಾರೆ ಎಂಬುದರ ಬಗ್ಗೆ ಬಹುತೇಕರಿಗೆ ಗೊತ್ತಿರುವುದಿಲ್ಲ. ನಿಮಗೂ ಸಹ ಈ ಬಗ್ಗೆ ತಿಳಿಯುವ ಕುತೂಹಲವಿದ್ದರೆ ಮುಂದೆ ಓದುತ್ತ ಸಾಗಿ.

ಮೈಸೂರು ಮಹಾರಾಜರಾದ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರು ತಮ್ಮ ಕಾಲದಲ್ಲಿ ಭಾರತದಷ್ಟೇ ಅಲ್ಲದೆ ಜಗತ್ತಿನ ಅತಿ ಸಿರಿವಂತ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದರು. ಅವರ ರಾಜವಂಶವು ಚಿನ್ನದ ಗಣಿಗಳು ಹಾಗೂ ಇತರೆ ಕಂಪನಿಗಳನ್ನು ಹೊಂದಿದ್ದವು. ಅವುಗಳ ಪೈಕಿ ಪೇಂಟ್ಸ್ ಮತ್ತು ವಾರ್ನಿಶ್ ಗಳನ್ನು ಉತ್ಪಾದಿಸುವ ಕಾರ್ಖಾನೆಯನ್ನು ಸಹ ಅವರು ಹೊಂದಿದ್ದರು.

ಇನ್ನು, 1951-52 ರಲ್ಲಿ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಗಳು ನಡೆದಾದ ಮೇಲೆ ಭಾರತ ಚುನಾವಣಾ ಆಯೋಗಕ್ಕೆ ನಡೆದಂತಹ ಚುನಾವಣೆಯಲ್ಲಿ ಹಲವು ಮೋಸ ಅಥವಾ ಬಹುಬಾರಿ ಒಬ್ಬ ವ್ಯಕ್ತಿಯಿಂದಲೇ ನಕಲಿ ಮತದಾನಗಳಾಗಿರುವ ಬಗ್ಗೆ ಮಾಹಿತಿ ದೊರೆಯಿತು.

ಇನ್ನು, ಮುಂದಿನ ಬಾರಿ ಈ ರೀತಿ ಆಗದಂತೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಮತದಾನ ಮಾಡದಂತೆ ಏನಾದರೂ ಮಾಡಬೇಕೆಂದು ಚುನಾವಣಾ ಆಯೋಗವು ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ ಆಫ್ ಇಂಡಿಯಾವನ್ನು ಸಂಪರ್ಕಿಸಿ ಸುಲಭವಾಗಿ ಕೈಯಿಂದ ಅಳಿಸಲಾಗದಂತಹ ಶಾಯಿಯೊಂದನ್ನು ತಮಗಾಗಿ ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿತು.

ತದನಂತರ ಎನ್.ಪಿ.ಎಲ್ ಸುಭದ್ರವಾಗಿ ಶಾಯಿಯ ಸೂತ್ರವೊಂದನ್ನು ಅಭಿವೃದ್ಧಿಪಡಿಸಿ ಆ ಪ್ರಕಾರ ಶಾಯಿಯನ್ನು ಉತ್ಪಾದಿಸಲು ಅಂದಿನ ಪ್ರತಿಷ್ಠಿತ ಮೈಸೂರು ಮಹಾರಾಜರ ಒಡೆತನದಲ್ಲಿದ್ದ ಮೈಸೂರು ಪೇಂಟ್ಸ್ ಆಮ್ಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯನ್ನು ಸಂಪರ್ಕಿಸಿತು.

ಅಂದಿನಿಂದ ಉತ್ಪಾದಿಸಲಾದ ಈ ಶಾಯಿಯು ಇಂದಿನವರೆಗೂ ಅದೊಂದೇ ಸಂಸ್ಥೆಯಿಂದಲೇ ಉತ್ಪಾದಿಸಲಾಗುತ್ತಿದ್ದು ಇದು ಒಂದು ಹೆಮ್ಮೆಯ ವಿಷಯವಾಗಿದೆ ಕರ್ನಾಟಕದವರ ಪಾಲಿಗೆ ಎನ್ನಬಹುದು. ಅಷ್ಟೆ, ಅಲ್ಲ, ಈ ಶಾಯಿಯನ್ನು ಇಂದು ಕೆನಡಾ, ಅಪ್ಘಾನಿಸ್ತಾನ್, ಟರ್ಕಿ, ಸಿಂಗಾಪುರ್ ಸೇರಿದಂತೆ 35ಕ್ಕೂ ಹೆಚ್ಚಿನ ದೇಶಗಳಿಗೆ ರಫ್ತು ಸಹ ಮಾಡಲಾಗುತ್ತಿದೆ ಎಂಬುದು ಇನ್ನೊಂದು ವಿಶೇಷ.

1962ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಶಾಯಿಯನ್ನು ಮೊದಲ ಬಾರಿಗೆ ಬಳಸಲಾಯಿತು ಹಾಗೂ ನಿರೀಕ್ಷಿಸಿದಂತೆ ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನಕಲಿ ಮತಗಳು ಅಂದರೆ ಒಂದಕ್ಕಿಂತ ಹೆಚ್ಚು ಬಾರಿ ಮಾಡಲಾಗುತ್ತಿದ್ದ ಮತಚಲಾವಣೆಗಳನ್ನು ನಿಲ್ಲಿಸಲಾಯಿತು.

ಇಂದು ಈ ಅಳಿಸಲಾಗದ ಶಾಯಿಯು 5, 7.5, 20, 50, 80 ಎಂಎಲ್ ಗಳ ಪ್ರಮಾಣದಲ್ಲಿ ಲಭ್ಯವಿದ್ದು 5 ಎಂಎಲ್ ಇರುವ ಶಾಯಿಯ ಸೀಸೆಯಿಂದ ಸುಮಾರು 300 ಜನರಿಗೆ ಗುರುತನ್ನು ಹಾಕಬಹುದಾಗಿದೆ. ಈ ಶಾಯಿಯನ್ನು ಅದರ ಸೀಸೆಯಿಂದ ಸೂರ್ಯನ ಬೆಳಕಿನೊಂದಿಗೆ ಒಡ್ಡಿಕೊಳ್ಳಲು ಹೊರತೆಗೆಯದ ಹೊರತು ಯಾವುದೇ ರಿಯಾಕ್ಷನ್ ತೋರಿಸುವುದಿಲ್ಲ.

ಭಾರತೀಯ ಚುನಾವಣಾ ಆಯೋಗವು ಈ ಶಾಯಿಯ ದೊಡ್ಡ ಗ್ರಾಹಕವಾಗಿದ್ದು ಪ್ರತಿ ಚುನಾವಣೆ ಸಂದರ್ಭದಲ್ಲಿ ಆಯಾ ಪ್ರದೇಶಗಳಲ್ಲಿ ನೋಂದಾಯಿಸಲ್ಪಟ್ಟ ಮತದಾರರ ಸಂಖ್ಯೆಗನುಗುಣವಾಗಿ ಬೇಕಾಗಿರುವ ಶಾಯಿಯ ಪ್ರಮಾಣ ಲೆಕ್ಕ ಹಾಕಿ ಆರ್ಡರ್ ನೀಡುತ್ತದೆ. ಆನಂತರ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಈ ಶಾಯಿಯನ್ನು ವಿತರಿಸಲಾಗುತ್ತದೆ ಹಾಗೂ ಅವರು ಅದನ್ನು ಪ್ರತ್ಯೇಕ ಮತದಾನ ಕೇಂದ್ರಗಳಿಗೆ ವಿತರಿಸುತ್ತಾರೆ.

ಚುನಾವಣಾ ಶಾಯಿ ವಿಶೇಷ ಏಕೆ?
ಈ ಶಾಯಿಯ ಉತ್ಪಾದನೆಯ ಸೂತ್ರ ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಆದರೂ, ಇದು ಅಲ್ಪ ಪ್ರಮಾಣದಲ್ಲಿ ಸಿಲ್ವರ್ ನೈಟ್ರೇಟ್ ಘಟಕಾಂಶಗಳನ್ನು ಹೊಂದಿದ್ದು ಇದು ಬೆಳಕಿನೊಂದಿಗೆ ರಿಯಾಕ್ಟ್ ಆಗುತ್ತದೆ. ಇದರಿಂದಾಗಿ ಇದು ಬೆರಳಿನ ಮೇಲೆ 3-4 ವಾರಗಳವರೆಗೂ ಅಳಿಯದಂತೆ ಉಳಿದಿರುತ್ತದೆ.

ಇದನ್ನು ನೀರಿನಿಂದ ತೊಳೆಯುವುದರ ಮುಲಕವಾಗಲಿ ಅಥವಾ ಇನ್ನ್ಯಾವುದೇ ರಾಸಾಯನಿಕ ಬಳಸಿ ಅಳಿಸುವುದನ್ನಾಗಲಿ ಮಾಡಲು ಸಾಧ್ಯವಿಲ್ಲ. ಈ ಶಾಯಿ ಉತ್ಪಾದನಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹೇಮಂತ್ ಕುಮಾರ್ ಅವರು ಹೇಳುವಂತೆ ಈ ಶಾಯಿಯು ಸೂರ್ಯನ ಕಿರಣಕ್ಕಾಗಲಿ ಅಥವಾ ರಾತ್ರಿಯ ಲೈಟಿನ ಪ್ರಕಾಶಕ್ಕಾಗಲಿ ಒಡ್ಡಿಕೊಂಡಾಗ ಮತ್ತಷ್ಟು ಪ್ರಖರವಾಗುತ್ತದೆ.

Leave a Comment

Your email address will not be published. Required fields are marked *