ಸಮಗ್ರ ನ್ಯೂಸ್: ಮೇ. 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರಕ್ಕೆ ಮೇ.8ರ ಸಂಜೆ ತೆರೆ ಬೀಳಲಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಮತದಾರರಲ್ಲದವರು ಆ ಕ್ಷೇತ್ರಗಳನ್ನು ಬಿಟ್ಟು ತೆರಳಬೇಕಿದ್ದು, ಸ್ಟಾರ್ ಪ್ರಚಾರಕರು ಕ್ಷೇತ್ರಗಳಲ್ಲಿ ಉಳಿಯುವಂತಿಲ್ಲ.
ಆಯಾ ಕ್ಷೇತ್ರಗಳ ಮಟ್ಟಪಟ್ಟಿಯಲ್ಲಿ ಹೆಸರಿಲ್ಲದ ರಾಜಕೀಯ ನಾಯಕರುಗಳೂ ಸೇರಿದಂತೆ ಎಲ್ಲಾ ಮುಖಂಡರು ಜಾಗ ಖಾಲಿ ಮಾಡಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮತದಾನ ಮುಕ್ತಾಯದ 48 ಗಂಟೆಗೂ ಮುನ್ನ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಅದರಂತೆ ಮೇ.8ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಯಾವುದೇ ಅಭ್ಯರ್ಥಿ ಧ್ವನಿವರ್ಧಕ ಬಳಸಿ, ಸಮಾವೇಶ, ರೋಡ್ ಶೋಗಳ ಮೂಲಕ ಮತಯಾಚಿಸುವಂತಿಲ್ಲ. ಆದರೆ, ಮನೆ ಮನೆಗೆ ತೆರಳಿ ಮಂಗಳವಾರ ಸಂಜೆಯವರೆಗೂ ಮತ ಕೇಳಬಹುದು.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಜೆಡಿಎಸ್ ನ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಇಂದು ಬಿರುಸಿನ ಪ್ರಚಾರ ನಡೆಸುವ ಮೂಲಕ ಕೊನೆ ಘಳಿಗೆಯಲ್ಲಿ ಮತದಾರರನ್ನು ಓಲೈಸುವ ಕಸರತ್ತು ನಡೆಸಿದ್ದಾರೆ.