ಸಮಗ್ರ ನ್ಯೂಸ್: ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಾದಗಿರಿಯ ಶಹಪುರ ತಾಲೂಕಿನ ಮದ್ದರಕಿ ಬಳಿಯ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ರಂಗಂಪೇಟೆಯ ನಾಗರಾಜ ಸಜ್ಜನ್ (59), ಪತ್ನಿ ಮಹಾದೇವಿ (50) ಹಾಗೂ ಸಂಬಂಧಿ ರೇಣುಕಾ (45) ಮೃತ ದುರ್ದೈವಿಗಳು.
ಮೃತರು ಇಂದು ಕಲಬುರಗಿಯಲ್ಲಿ ಸಂಬಂಧಿಕರ ಮದುವೆಗೆ ತೆರಳಿದ್ದು ಮದುವೆ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಐದಾರು ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅಪಘಾತದ ಬಳಿಕ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ.
ಭೀಕರ ಅಪಘಾತದಿಂದಾಗಿ ಕಾರು ರಸ್ತೆ ಮಧ್ಯದಲ್ಲಿ ನಿಂತಿದ್ದು, ಸಂಚಾರ ಅಸ್ತವ್ಯಸ್ಥವಾಗಿತ್ತು. ಇಬ್ಬರ ಮೃತದೇಹಗಳು ಕಾರಿನಲ್ಲೇ ಸಿಲುಕಿತ್ತು. ಸ್ಥಳಕ್ಕೆ ಸುರಪುರ ಡಿವೈಎಸ್ಪಿ ಜೆ ಎಸ್ ನ್ಯಾಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.