ಸಮಗ್ರ ನ್ಯೂಸ್: ಬಿಜೆಪಿ ಯಾವುದೇ ಬೆಲೆ ತೆತ್ತಾದರೂ ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜನತಾದಳ ( ಜಾತ್ಯತೀತ ) ನಾಯಕ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಮೂಲಕ ತೆರೆಮರೆಗೆ ಸರಿದಿದ್ದ ಬ್ರಾಹ್ಮಣ ಮುಖ್ಯಮಂತ್ರಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡಲ್ಲ. ಬಿಜೆಪಿಯೊಳಗೆ ಬ್ರಾಹ್ಮಣರನ್ನು ಸಿಎಂ ಮಾಡುವ ಕೆಲಸ ಸದ್ದಿಲ್ಲದೆ ನಡೆದಿದೆ ಎಂದು ಆರೋಪಿಸಿದರು. ಪರಿವಾರ, ಎಟಿಎಂ ಎಂದು ಟೀಕಿಸುವ ಪ್ರಧಾನಿ ಮೋದಿ, ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಏಕೆ ಮಾತನಾಡುವುದಿಲ್ಲ. ಮೋದಿ ಕೇವಲ ಬುರುಡೆ ಭಾಷಣ ಮಾಡುತ್ತಾರೆ.
ಒಂದು ವಾರ ಮಾತ್ರ ಮೋದಿ ರಾಜ್ಯಕ್ಕೆ ಬರುತ್ತಾರೆ. ನಂತರ ಮತ್ತೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದರು. ಜೆಡಿಎಸ್ ಒಂದು ಕುಟುಂಬದ ಪ್ರೈವೇಟ್ ಕಂಪನಿ: ಪ್ರಧಾನಿ ಮೋದಿ ಪ್ರಧಾನಿ ಸೇರಿದಂತೆ ಕೇಂದ್ರದ ಹಲವು ನಾಯಕರು ಚುನಾವಣೆ ಬಳಿಕ ರಾಜ್ಯಕ್ಕೆ ಟಾಟಾ ಮಾಡಿ ಹೋಗುತ್ತಾರೆ. ಮುಂದೆ ಲೋಕಸಭಾ ಚುನಾವಣೆಗೆ ಬರುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಅಂತಾರೆ, ಲೂಟಿ ಹೊಡೆಯೋದೆ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿಯಾ? ಎಂದು ಪ್ರಶ್ನಿಸಿದ ಮಾಜಿ ಸಿಎಂ, ಮೋದಿ, ಜೆಡಿಎಸ್ ಕಾಂಗ್ರೆಸ್ ನ ಬಿ ಟೀಂ ಅಂತಾರೆ, ಸಿದ್ದರಾಮಯ್ಯ ನಮ್ಮನ್ನ ಬಿಜೆಪಿ ಬಿ ಟೀಂ ಅಂತಾರೆ, ನಾನು ಯಾರ ಬಿ ಟೀಂ ಅಲ್ಲ, ನಾನು ನಾಡಿನ ಜನರ ಬಿ ಟೀಂ ಎಂದರು.