ಸಮಗ್ರ ಸಮಾಚಾರ:ಕೆಲ ದಿನಗಳ ಹಿಂದೆ ಹಾಗೂ ಶನಿವಾರ ಸುಳ್ಯ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಸುಳ್ಯದ ಪಯಸ್ವಿನಿ ನದಿಯಲ್ಲಿ ನೀರಿನ ಮಟ್ಟ ಮತ್ತೆ ತುಸು ಏರಿಕೆಯಾಗಿದೆ. ನದಿಯ ಸಂಗ್ರಹಣದಿಂದ ನೀರನ್ನು ಹೊರಕ್ಕೆ ಬಿಡಲಾಗಿದೆ.
ಪಯಸ್ವಿನಿಯಲ್ಲಿ ನೀರಿನ ಮಟ್ಟ ಇಳಿಕೆಗೊಂಡ ಹಿನ್ನಲೆಯಲ್ಲಿ ನಗರಕ್ಕೆ ಕುಡಿಯುವ ನೀರು ಪೊರೈಸಲು ಪಯಸ್ವಿನಿಯ ಜಾಕ್‌ವೆಲ್ ಬಳಿ ನೀರನ್ನು ಮಣ್ಣು ಹಾಕಿ ಹಿಡಿದಿಡಲಾಗಿತ್ತು. ಸುಳ್ಯದಲ್ಲಿ ಮಳೆಯಾದ ಹಿನ್ನಲೆಯಲ್ಲಿ ನದಿಯಲ್ಲಿ ನೀರು ಏರಿಕೆಗೊಂಡಿದ್ದು, ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ನೀರು ಸಂಗ್ರಹಣ ಸ್ಥಳದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನೀರು ಹಿಡಿದಿಡಲು ಮಣ್ಣಿನಿಂದ ನೀರನ್ನು ತಡೆಯಾಗಿದ್ದನ್ನು ತೆರವು ಮಾಡಲಾಗಿದೆ. ಇದರಿಂದ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿರುವಲ್ಲಿ ನೀರು ಕೆಳಭಾಗದತ್ತ ಹರಿವು ಆರಂಭಿಸಿದೆ. ಶನಿವಾರವೂ ಉತ್ತಮ ಮಳೆಯಾಗಿದ್ದು, ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿವು ಆರಂಭಿಸಿದೆ.

ಅಲ್ಲದೆ ಮಳೆ ಬಂದಿರುವುದರಿಂದ ಕೃಷಿಕರೂ ತೋಟಕ್ಕೆ ನೀರು ಹಾಕುವುದನ್ನು ನಿಲ್ಲಿಸಿದ್ದಲ್ಲಿ ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆ ದೂರವಾಗುವ ವಿಶ್ವಾಸ ಜನತೆಯದ್ದು. ಒಟ್ಟಿನಲ್ಲಿ ೨೦ – ೨೫ ದಿನಗಳ ವರೆಗೆ ನಗರಕ್ಕೆ ನೀರಿನ ಸಮಸ್ಯೆ ದೂರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ನಗರದಿಂದ ಕೆಳ ಭಾಗದವರಿಗೂ ನೀರು ಲಭಿಸಲಿ ಎನ್ನುವ ಉದ್ದೇಶದಿಂದಲೂ ನೀರನ್ನು ಹೊರ ಬಿಡಲಾಗಿದೆ.