ಸಮಗ್ರ ನ್ಯೂಸ್: ರಾಜ್ಯ ಚುನಾವಣಾ ಕಣ ರಂಗೇರಿದೆ, ರಾಷ್ಟ್ರದ ನಾಯಕರು ರಾಜ್ಯಕ್ಕೆ ಲಗ್ಗೆಯಿಟ್ಟು ಪಕ್ಷಗಳ ಪರವಾಗಿ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಈಗಾಗಲೇ ಮತದಾರನ ಮನಸ್ಸಿನಲ್ಲಿ ಏನಿದೆ ಎಂದು ಹಲವು ಸರ್ವೆಗಳಿಂದ ಸೂಚನೆ ಸಿಕ್ಕಿದೆ. ಇದೀಗ ಎಬಿಪಿ ಸಿ-ವೋಟರ್ ಸಮೀಕ್ಷೆ ನಡೆಸಿದ್ದು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದೆ.
ಎಬಿಪಿ ನ್ಯೂಸ್ ಮತ್ತು ಸಿ ವೋಟರ್ ಕರ್ನಾಟಕದ ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿದೆ. 17,772 ಜನರಿಂದ ಪ್ರತಿಕ್ರಯೆಗಳನ್ನು ಸ್ವೀಕರಿಸಲಾಗಿದೆ. ಸಮೀಕ್ಷೆ ಪ್ರಕಾರ 224 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 107 ಇಂದ 119 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಅಂದಾಜಿಸಿದೆ. ಆಡಳಿತಾರೂಢ ಬಿಜೆಪಿ 74 ರಿಂದ 86 ಸ್ಥಾನಗಳಿಗೆ ಕುಸಿಯಬಹುದು ಎಂದು ಸಮೀಕ್ಷೆಯಲ್ಲಿ ತಿಳಿಸಿದೆ. ಇನ್ನು ಜೆಡಿಎಸ್ 23 ರಿಂದ 35 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಪಕ್ಷೇತರ ಅಥವಾ ಇತರೆ ಪಕ್ಷಗಳ 0-5 ಸ್ಥಾನಗಳನ್ನು ಪಡೆಯುತ್ತಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಒಟ್ಟಾರೆ ರಾಜ್ಯದಲ್ಲಿ ಮತಹಂಚಿಕೆ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಬಿಜೆಪಿಗಿಂತ ಶೇಕಡಾ 5ರಷ್ಟು ಮುಂದಿದೆ. ಕಾಂಗ್ರೆಸ್ ಶೇಕಡಾ 40 ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಶೇಕಡಾ 35ರಷ್ಟು ಮತ ಪಡೆಯಲಿದೆ, ಜೆಡಿಎಸ್ ಶೇಕಡಾ 17ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ. ಉಳಿದ 8 ಪ್ರತಿಶತ ಮತಗಳು ಪಕ್ಷೇತರ ಮತ್ತು ಇತರೆ ಪಕ್ಷಗಳ ಪಾಲಾಗುವ ಸಾಧ್ಯತೆ ಇದೆ ಎಂದು ಸರ್ವೆ ವರದಿ ತಿಳಿಸಿದೆ.
ಎಬಿಪಿ ನ್ಯೂಸ್ ಮಾರ್ಚ್ 29ರಂದು ಕೂಡ ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಸಮೀಕ್ಷೆಯ ವರದಿಯನ್ನು ಪ್ರಕಟಿಸಿತ್ತು. ಆಗಿನ ಸಮೀಕ್ಷೆಯಲ್ಲಿಯೂ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಪಡೆದುಕೊಂಡಿತ್ತು. ಕಾಂಗ್ರೆಸ್‌ಗೆ 115-127 ಸ್ಥಾನಗಳು, ಬಿಜೆಪಿಗೆ 68-80 ಸ್ಥಾನಗಳು, ಜೆಡಿಎಸ್‌ಗೆ 23-35 ಸ್ಥಾನಗಳು ಮತ್ತು ಇತರರಿಗೆ 0-2 ಸ್ಥಾನಗಳು ಸಿಗುತ್ತವೆ ಎಂದು ತಿಳಿಸಿತ್ತು.
ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಜನ ಅಸಮಾಧಾನ ಹೊಂದಿರುವುದು ಸ್ಪಷ್ಟವಾಗಿದೆ. ಹಲವು ಹಗರಣಗಳು, ಭ್ರಷ್ಟಾಚಾರ, ಹಿರಿಯ ನಾಯಕರ ಕಡೆಗಣನೆ, ಪ್ರಮುಖರಿಗೆ ಟಿಕೆಟ್ ನಿರಾಕರಿಸಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲು ಕಾರಣವಾಗುವ ಸಾಧ್ಯತೆ ಇದೆ.