ಸಮಗ್ರ ನ್ಯೂಸ್: ಕಳೆದ ಜುಲೈ ತಿಂಗಳಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ನಾಯಕ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಭೇಟಿ ನೀಡಿದರು.

ಪ್ರವೀಣ್ ನೆಟ್ಟಾರು ಮನೆಗೆ ಆಗಮಿಸಿದ ಜೆ.ಪಿ.ನಡ್ಡಾ ಅವರನ್ನು ಮನೆಯವರು ಸ್ವಾಗತಿಸಿದರು. ಬಳಿಕ ಜೆ.ಪಿ. ನಡ್ಡಾ ಅವರು ದಿ.ಪ್ರವೀಣ್ ನೆಟ್ಟಾರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಬಿಜೆಪಿ ವತಿಯಿಂದ ನಿರ್ಮಿಸಿಕೊಡಲಾದ ನೂತನ ಮನೆಯನ್ನು ವೀಕ್ಷಿಸಿದರು. ಮನೆಯವರ ಜೊತೆ ಮಾತುಕತೆ ನಡೆಸಿದರು.

ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಜೆ.ಪಿ.ನಡ್ಡಾ ಅವರಿಗೆ ಮನೆಯವರನ್ನು ಪರಿಚಯಿಸಿ ಮಾಹಿತಿ ನೀಡಿದರು. ಪ್ರವೀಣ್ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ, ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಸೇರಿದಂತೆ ಮನೆಯವರು, ಬಿಜೆಪಿ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜೆ.ಪಿ.ನಡ್ಡಾ ಅವರು ಹೆಲಿಕಾಪ್ಟರ್ ಮೂಲಕ ಸುಳ್ಯಕ್ಕೆ ಆಗಮಿಸಿ, ರಸ್ತೆ ಮಾರ್ಗದ ಮೂಲಕ ಕಾರಲ್ಲಿ ಬೆಳ್ಳಾರೆಯ ನೆಟ್ಟಾರಿಗೆ ಆಗಮಿಸಿದರು. ಪೊಲೀಸ್ ಇಲಾಖೆ, ಅರೆಸೇನಾ ಪಡೆ ವತಿಯಿಂದ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.