ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನರೇಂದ್ರ ಮೋದಿ ರೋಡ್ ಶೋಗೆ ಆಗಮಿಸಲಿದ್ದಾರೆ ಎಂದು ರಸ್ತೆಯನ್ನು ಬಂದ್ ಮಾಡಲಾಗಿದ್ದು, ತಾಳಿ ಕಟ್ಟಲು ಹೋಗುತ್ತಿದ್ದ ಮದುಮಗನ್ನು ಕಲ್ಯಾಣ ಮಂಟಪಕ್ಕೆ ಹೋಗಲು ಬಿಡದೇ ಪೊಲೀಸರು ಅಡ್ಡಗಟ್ಟಿದ ಘಟನೆ ಶನಿವಾರ ನಡೆದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ರಸ್ತೆಯಲ್ಲಿ ಬಹಿರಂಗ ಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಪ್ರಧಾನಿ ಮೋದಿ ಸಂಚಾರ ಮಾಡುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಆದರೆ, ಈ ರಸ್ತೆಯಲ್ಲಿ ಹೋಗುತ್ತಿದ್ದ ಮದುಮಗ ಸರ್ ತನ್ನ ಮದುವೆಯಿದ್ದು, ಚೌಟ್ರಿ ಹೋಗಬೇಕು ಬ್ಯಾರಿಕೇಡ್ ತೆರೆದು ನನ್ನನ್ನು ಹೋಗಲು ಬಿಡಿ ಎಂದರೂ ಬಿಡದೇ ಮದುಮಗನನ್ನು ಅಡ್ಡಗಟ್ಟಿದ ಪೊಲೀಸರು ಆತನನ್ನು ಸತಾಯಿಸುತ್ತಿರುವುದು ಕಂಡುಬಂದಿದೆ.
ಸುಂಕದಕಟ್ಟೆ ರಸ್ತೆಯಲ್ಲಿರುವ ಅಕ್ಷಯ್ ಚೌಟ್ರಿಯ ಬಳಿ ಘಟನೆ ನಡೆದಿದೆ. ಇಂದು ಮತ್ತು ನಾಳೆ ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ ರಿಷಪ್ಷನ್ ಇದ್ದು, ಭಾನುವಾರ ತಾಳಿ ಮುಹೂರ್ತವಿದೆ. ಹೀಗಾಗಿ, ಮದುಮಗ ಕಾರಿನಲ್ಲಿ ಬಂದು ಕಲ್ಯಾಣ ಮಂಟಪಕ್ಕೆ ಹೋಗಲು ಮುಂದಾಗಿದ್ದಾನೆ. ಆದರೆ, ಮದುಮಗನಿಗೆ ಸ್ವಲ್ಪ ದೂರದಲ್ಲಿರುವ ಚೌಟ್ರಿಗೆ ಹೋಗಲು ಬಿಡದೇ ಸಂಚಾರಿ ಪೊಲೀಸರು ಅಡ್ಡಗಟ್ಟಿರುವ ಘಟನೆ ಸುಂಕದಕಟ್ಟೆ ರಸ್ತೆಯ ನೈಸ್ ರೋಡ್ ಜಂಕ್ಷನ್ ಬಳಿ ನಡೆದಿದೆ.
ಇದರಿಂದ ಆತಂಕಗೊಂಡ ಮದುಮಗ ಚೌಟ್ರಿಯಲ್ಲಿದ್ದ ತನ್ನ ಕುಟುಂಬಸ್ಥರನ್ನು ಕರೆಸಿಕೊಂಡಿದ್ದಾರೆ. ನಂತರ, ಎಲ್ಲರೂ ಬಂದು ಮದುವೆ ಚೌಟ್ರಿಯಲ್ಲಿ ಎಲ್ಲ ಸಿದ್ಧತೆಯನ್ನು ಮಾಡಲಾಗಿದ್ದು, ಮದುಮಗನ ಕಾರು ಹೋಗಲು ಅವಕಾಶ ಮಾಡಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಳಿಕ ಎಲ್ಲವನ್ನು ಪರಿಶೀಲನೆ ಮಾಡಿದ ಪೊಲೀಸರು ಕೊನೆಗೆ ಸಾರ್ವಜನಿಕರಿಂದ ಗಲಾಟೆ ಎದುರಾಗಬಹುದು ಎಂದು ಅರಿತು, ಮದುಮಗನನ್ನು ಚೌಟ್ರಿಯತ್ತ ತೆರಳಲು ಅನುಕೂಲ ಆಗುವಂತೆ ಬ್ಯಾರಿಕೇಡ್ ಅನ್ನು ತೆರೆದು ಅವಕಾಶ ಮಾಡಿಕೊಟ್ಟರು. ನಂತರ, ಈ ರಸ್ತೆಯನ್ನು ಬಂದ್ ಮಾಡಲಾಗಿದ್ದು, ರೋಡ್ ಶೋ ಮುಕ್ತಾಯದವರೆಗೆ ಈ ರಸ್ತೆಯಲ್ಲಿ ಓಡಾಡದಂತೆ ಸೂಚನೆ ನೀಡಿ ಕಳುಹಿಸಿದರು.