ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಕರೆದಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
‘ಯತ್ನಾಳರ ವಿಷಕನ್ಯೆ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅನುಮೋದನೆ ಇರಬಹುದೇನೋ, ಅವರದ್ದೂ ಇದೇ ಮನಸ್ಥಿತಿಯಲ್ಲವೇ. ಕಾಂಗ್ರೆಸ್ಸಿನ ವಿಧವೆ, ಜರ್ಸಿ ಹಸು, ವಿಷಕನ್ಯೆ, ಶ್ರೀಮತಿ ಸೋನಿಯಾ ಗಾಂಧಿಯವರ ಬಿಜೆಪಿ ಪ್ರಯೋಗಿಸುವ ಅತ್ಯಂತ ಕೀಳು ಪದಗಳು ಇನ್ನೆಷ್ಟಿವೆ? ಸಿಎಂ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಯತ್ನಾಳ್ ಈ ಹೇಳಿಕೆ ನೀಡಿದರೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಬಾರ್ ಡ್ಯಾನ್ಸರ್, ಕಾಂಗ್ರೆಸ್ಸಿನ ವಿಧವೆ, ಜರ್ಸಿ ಹಸು, ವಿಷಕನ್ಯೆ… ಬಿಜೆಪಿಗರಿಂದ ಈ ರೀತಿಯ ಕೀಳು ಮಟ್ಟದ ನಿಂದನೆಗೆ ಒಳಗಾಗುತ್ತಿರುವ ಶ್ರೀಮತಿ ಸೋನಿಯಾ ಗಾಂಧಿಯವರು ಮಾಡಿದ ಅಪರಾದವಾದರೂ ಏನು? ಅವರು ಭಾರತದ ಸಂಸ್ಕೃತಿ ಅಳವಡಿಸಿಕೊಂಡು ಬದುಕುತ್ತಿರುವುದು ತಪ್ಪೇ? ದೇಶಕ್ಕಾಗಿ ಪತಿಯನ್ನು ಕಳೆದುಕೊಂಡಿದ್ದು ತಪ್ಪೇ? ಇದು ಸೋನಿಯಾ ಗಾಂಧಿಯವರೊಬ್ಬರ ಪ್ರಶ್ನೆಯಲ್ಲ, ಇಡೀ ಸ್ತ್ರೀಕುಲದ ಘನತೆಯ ಪ್ರಶ್ನೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ನರೇಂದ್ರ ಮೋದಿ ಅವರೇ, ಬಸವರಾಜ ಬೊಮ್ಮಾಯಿ ಅವರೇ, ಯತ್ನಾಳರ ಹೇಳಿಕೆಗೆ ನಿಮ್ಮದೇ ಕುಮ್ಮಕ್ಕು ಇದೆಯೇ? ಮೋದಿ ಮಹಿಳೆಯರ ಬಗ್ಗೆ ಕೀಳು ಮಟ್ಟದ ಧೋರಣೆ ಹೊಂದಿರುವುದೇಕೆ? ಮೋದಿಯ ಈ ದುರ್ಗುಣವನ್ನ ಪ್ರತಿ ಬಿಜೆಪಿಗರೂ ಅನುಸರಿಸುತ್ತಿರುವುದೇಕೆ? ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಃ ಎಂಬುದರ ವಿರುದ್ಧ ಬಿಜೆಪಿ ನಡೆದುಕೊಳ್ಳುತ್ತಿರುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಏಪ್ರಿಲ್ 28 ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಯತ್ನಾಳ್, ‘ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿಯನ್ನು ನಾಗರಹಾವು ಎಂದು ಕರೆದಿದ್ದಾರೆ. ಅವರು ಹಿರಿಯ ವ್ಯಕ್ತಿ ಮತ್ತು ಅವರ ಬಗ್ಗೆ ನನಗೆ ಗೌರವವಿದೆ. ನಮ್ಮ ಪ್ರಧಾನಿಯನ್ನು ಇಡೀ ವಿಶ್ವವೇ ಗೌರವಿಸುತ್ತದೆ. ಹಿಂದೆ ಮೋದಿಗೆ ವೀಸಾ ನಿರಾಕರಿಸಿದ್ದ ಅಮೆರಿಕ, ಈಗ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತದೆ. ನೀವು ಅವರನ್ನು ನಾಗರಹಾವು ಎಂದು ಕರೆಯಿರಿ. ನೀವು ಹೆಚ್ಚು ಅವಲಂಬಿಸಿರುವ ಸೋನಿಯಾ ಗಾಂಧಿ ವಿಷ ಕನ್ಯೆಯೇ?’ ಎಂದು ಹೇಳಿಕೆ ನೀಡಿದ್ದಾರೆ.