ಸಮಗ್ರ ನ್ಯೂಸ್: ಯುವಕನೊರ್ವ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34) ಎಂದು ಗುರುತಿಸಲಾಗಿದೆ.
ಗೋಪಾಲಕೃಷ್ಣ ಅವರು ತನ್ನ ಮನೆಯ ತೋಟದ ಕೆರೆಯಲ್ಲಿರುವ ಪಾಚಿಯನ್ನು ತೆಗೆಯಲು ಒಬ್ಬಂಟಿಯಾಗಿ ತೆರಳಿದ್ದು, ವಾಪಾಸು ಬಾರದೇ ಇದ್ದುದರಿಂದ ಮನೆಯವರು ಕೆರೆಯ ಬಳಿ ಹೋಗಿ ನೋಡಿದಾಗ ಗೋಪಾಲಕೃಷ್ಣನ ಚಪ್ಪಲಿ ಕೆರೆಯ ನೀರಿನಲ್ಲಿ ತೇಲುತ್ತಿತ್ತು. ಸಂಶಯಗೊಂಡು ಮರದ ದೋಂಟಿಯೊಂದನ್ನು ಕೆರೆಯ ನೀರಿಗೆ ಹಾಕಿ ನೋಡಿದಾಗ ಗೋಪಾಲಕೃಷ್ಣನ ಅಂಗಿ ದೋಂಟಿಯ ಕೊಕ್ಕೆ ಸಿಕ್ಕಿಕೊಂಡಿದೆ.
ಮೃತರ ತಂದೆ ಮೋನಪ್ಪ ನಾಯ್ಕ ಅವರು ಕೂಡಲೇ ಸಹೋದರರನ್ನು ಕರೆದು ಮೃತದೇಹವನ್ನು ಮೇಲಕ್ಕೆತ್ತಿ ಆಟೋ ರಿಕ್ಷಾವೊಂದರಲ್ಲಿ ಕೆಯ್ಯೂರುವರೆಗೆ ತೆಗೆದುಕೊಂಡು ಬಂದು ಅಲ್ಲಿಂದ ಅಂಬ್ಯುಲೆನ್ಸ್ ವಾಹನವೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಗೋಪಾಲಕೃಷ್ಣನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತ ಗೋಪಾಲಕೃಷ್ಣ ಅವರು ಪಡುಬಿದ್ರೆಯ ಅದಾನಿ ಪವರ್ ಲಿಮಿಟೆಡ್ ಯಪಿಎಸ್ಎಎಲ್ ಇಲ್ಲಿ ಇಲೆಕ್ಟ್ರಿಕಲ್ ಮೆಂಟೈನೆನ್ಸ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ರಜೆದಿನದಂದು ಮನೆಯಲ್ಲಿ ಇದ್ದ ವೇಳೆ ಕೆರೆಯ ಪಾಚಿ ತೆಗೆಯಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಮೃತರ ತಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.