ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಾವು ಏರತೊಡಗುತ್ತಿದ್ದಂತೆಯೇ ಮಳೆಯ ಸಿಂಚನವಾಗುತ್ತಿದೆ. ಬುಧವಾರ ಹನಿಮಳೆಯೊಂದಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಪ್ರಚಾರ ನಡೆಸಿದರೆ, ಭಾರಿ ಸಂಚಲನವನ್ನೇ ಸೃಷ್ಟಿಸಿರುವ ಪುತ್ತೂರು ಕ್ಷೇತ್ರದಲ್ಲಿ ಹಿಂದು ಸಂಘಟನೆಗಳ ಮುಖಂಡ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಜಿಲ್ಲೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡುತ್ತಿರುವುದು ಈ ಚುನಾವಣೆಯಲ್ಲಿ ಇದೇ ಮೊದಲಾಗಿದ್ದು, ಪ್ರಚಾರದ ದೃಷ್ಟಿಯಿಂದ ಗಮನ ಸೆಳೆಯುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದಷ್ಟೇ ಅಲ್ಲ, ನಾಮಪತ್ರ ಸಲ್ಲಿಕೆ ವೇಳೆಯೂ ಬೃಹತ್ ಮೆರವಣಿಗೆ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದರು ಪುತ್ತಿಲ. ಮಾತ್ರವಲ್ಲ ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಇಂದು ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ನಡುವೆ ಜಿಲ್ಲೆಯಾದ್ಯಂತ ಬಿಜೆಪಿ, ಕಾಂಗ್ರೆಸ್ ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದಾರೆ.
1997ರ ಸಂದರ್ಭ ಸೌಮ್ಯಾ ಭಟ್ ಎಂಬ ವಿದ್ಯಾರ್ಥಿನಿಯ ಹತ್ಯೆ ನಡೆದ ಸಂದರ್ಭ ಇಡೀ ಪುತ್ತೂರು ಹೊತ್ತಿ ಉರಿದಿತ್ತು. ಬಿಜೆಪಿ ಮುಂಚೂಣಿಯಲ್ಲಿದ್ದುಕೊಂಡು ಹತ್ಯೆ ವಿರುದ್ಧ ಹೋರಾಟ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೌಮ್ಯಾ ಭಟ್ ಸ್ಮರಣಾರ್ಥ ಯುವತಿಯರಿಗೆ ಸ್ವ-ಉದ್ಯೋಗ ತರಬೇತಿ ಕೇಂದ್ರ, ಇತ್ತೀಚೆಗೆ ಮತಾಂಧರಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರ್ ಸ್ಮರಣಾರ್ಥ ಯುವಕರಿಗೆ ಸ್ವ-ಉದ್ಯೋಗ ತರಬೇತಿ ಕೇಂದ್ರ, ಸೈನ್ಯಕ್ಕೆ ತರಬೇತಿ, 24 ಗಂಟೆಗಳ ಸಹಾಯವಾಣಿ, ದಿ.ಕಾರ್ತಿಕ್ ಮಾರ್ಲ ಸ್ಮರಣಾರ್ಥ ಸರಕಾರಿ ಐಟಿಐ, ಸುಸಜ್ಜಿತ ಕ್ರೀಡಾಂಗಣ ವಿಟ್ಲವನ್ನು ತಾಲೂಕು ಮಾಡುವ ಸಂಕಲ್ಪ, ವಿಟ್ಲದಲ್ಲಿ ಶಾಸಕರ ಕಚೇರಿ, ಪುತ್ತೂರಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹೀಗೆ 31 ಅಂಶಗಳ ಪ್ರಣಾಳಿಕೆಯನ್ನು ಹೊರತಂದಿದ್ದಾರೆ.