ಸಮಗ್ರ ನ್ಯೂಸ್: ‘ ಬಿಜೆಪಿ ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂ ಕಮಿಷನ್ ಹೊಡೆಯುತ್ತಿದ್ದು, ಅಭಿವೃದ್ಧಿ ಕುಂಠಿತವಾಗಿದೆ, ಕಾಮಗಾರಿ, ಯೋಜನೆಗಳು ಹಳ್ಳ ಹಿಡಿದಿದ್ದು, ಇದರ ವಿರುದ್ಧ ಜನಸಾಮಾನ್ಯರು ಹೋರಾಡಬೇಕಿದೆ’ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಸುಳ್ಯದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ಹಲವು ಸ್ತರಗಳಲ್ಲಿ ಲೂಟಿ ಹೊಡೆಯಲಾಗುತ್ತಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದರೂ ನಾ ತಿನ್ನಲ್ಲ, ತಿನ್ನಲು ಬಿಡಲ್ಲ ಎಂದು ಘೋಷಿಸಿಕೊಳ್ಳುತ್ತಿರುವ ಪ್ರಧಾನಿಗಳ ಹೇಳಿಕೆ ಹಾಸ್ಯಾಸ್ಪದ. ಯುವಕರು, ಶಿಕ್ಷಿತರು ಉದ್ಯೋಗ ವಂಚಿತರಾಗಿದ್ದು, ಭಾರತದಲ್ಲಿ ಔದ್ಯೋಗಿಕ ಸಮಸ್ಯೆ ಉಂಟಾಗಿದೆ ಎಂದರು.
ಬಡವರ ಕೈಯಿಂದ ಕಿತ್ತು ಶ್ರೀಮಂತರಿಗೆ ಸೌಲಭ್ಯ ನೀಡಲಾಗುತ್ತಿದೆ. ಕಾಂಗ್ರೆಸ್ ಸ್ಥಾಪಿಸಿದ ಬೃಹತ್ ಯೋಜನೆಗಳನ್ನು ತನ್ನದೇ ಯೋಜನೆ ಎಂದು ಹೇಳುತ್ತಿರುವ ಬಿಜೆಪಿ ಒಂಬತ್ತು ವರ್ಷದಲ್ಲಿ ಮಾಡಿದ ಸಾಧನೆ ಏನು? ಎಂಬುದನ್ನು ಜನರ ಮುಂದಿಡಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಒಡೆದು ಆಳುವ ನೀತಿ ಹೊರತಾಗಿ ಬಿಜೆಪಿ ಏನೂ ಮಾಡಿಲ್ಲ, ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಹಿಳೆಯರಿಗೆ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಯ ಗ್ಯಾರಂಟಿ ಬಗ್ಗೆ ಮಾತನಾಡಿದ ಖರ್ಗೆ ಮುಂದೆ ಕಾಂಗ್ರೆಸ್ ಸರ್ಕಾರದಿಂದ ಈ ಯೋಜನೆಗಳ ವಾಗ್ದಾನ ಮಾಡಿ ಮತಯಾಚಿಸಿದರು.
ವೇದಿಕೆಯಲ್ಲಿ ಎಂಎಲ್ ಸಿ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಪ್ರಮುಖರು ಉಪಸ್ಥಿತರಿದ್ದರು.