ಸಮಗ್ರ ನ್ಯೂಸ್: 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ವಂಶಸ್ಥರಾದ ಮಂಜುಶ್ರೀ ಕೆದಂಬಾಡಿ ಅವರು ಪಿಯು ಪರೀಕ್ಷೆಯಲ್ಲಿ 591 ಅಂಕಗಳನ್ನು ಪಡೆದು ದ.ಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಮಂಜುಶ್ರೀ ಕೆದಂಬಾಡಿ ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದ ತೀರ್ಥರಾಮ ಕೆದಂಬಾಡಿ ಮತ್ತು ಸಂಧ್ಯಾ ಕೆದಂಬಾಡಿ ದಂಪತಿಯ ಪುತ್ರಿ. ಕೆದಂಬಾಡಿ ರಾಮಯ್ಯಗೌಡರ ಐದನೇ ತಲೆಮಾರಿನ ಮಂಜುಶ್ರೀ ಆಗಿದ್ದು, ರಾಮಯ್ಯಗೌಡರು ಬ್ರಿಟಿಷರ ವಿರುದ್ಧ ನಾನಾ ತಂತ್ರಗಾರಿಕೆಯಿಂದ ಹೋರಾಡಿದ್ದರು.
ಮಂಜುಶ್ರೀ ಸುಳ್ಯದ ಕೆವಿಜಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲು ನಡೆದ ಅಮರ ಸುಳ್ಯ ದಂಗೆಯ ರೂವಾರಿ ಕೆದಂಬಾಡಿ ರಾಮಯ್ಯ ಆಗಿದ್ದರು. ಅವರೊಬ್ಬ ಹೋರಾಟಗಾರ ಮತ್ತು ಕ್ರಾಂತಿಕಾರಿಯಾಗಿದ್ದು ಬ್ರಿಟಿಷರ ವಿರುದ್ದ ಸುಳ್ಯದಿಂದ ರೈತರನ್ನು ಒಗ್ಗೂಡಿಸಿ1837 ರಲ್ಲಿ ಅಮರ ಸುಳ್ಯ ದಂಗೆಯನ್ನು ಮುನ್ನಡೆಸಿದರು.