ಸಮಗ್ರ ನ್ಯೂಸ್: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮುನಿಸಿಕೊಂಡು ಜೆಡಿಎಸ್ ಸೇರಿದ್ದ ವಿಶ್ವನಾಥ್ ಅವರು, ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷರಾಗಿದ್ದರು. ಆದರೆ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ಆಪರೇಷನ್ ಕಮಲದಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
2018ರ ಚುನಾವಣೆ ಬೆನ್ನಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದವು. ಎರಡು ಪಕ್ಷದಲ್ಲಿ ಹೊಂದಣಿಕೆ ಸರಳವಾಗಿ ಸಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಕಂಡರೂ ಎರಡೂ ಪಕ್ಷದ ಸದಸ್ಯರಲ್ಲಿ ವೈಮನಸ್ಸು ಮೂಡಿತ್ತು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲವು ನಾಯಕರು ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದಿದ್ದರು. ಪರಿಣಾಮ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿದ್ದು ಹೋಗಿತ್ತು. ಬಂಡಾಯವೆದ್ದು ಬಿಜೆಪಿ ಸೇರಿದ್ದ ಶಾಸಕರುಗಳಲ್ಲಿ ಹೆಚ್.ವಿಶ್ವನಾಥ್ ಕೂಡ ಒಬ್ಬರಾಗಿದ್ದರು.
ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಹಳ್ಳಿಹಕ್ಕಿ ಅಂತಲೇ ಖ್ಯಾತರಾದ ವಿಶ್ವನಾಥ್ ಅವರು ಕಾಂಗ್ರೆಸ್ ಗೂಡಿಗೆ ಸೇರಲಿದ್ದಾರೆ.