ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಹೊಸ ಅಭ್ಯರ್ಥಿಗೆ ಮಣೆ ಹಾಕಿದ್ರೆ, ಇತ್ತ ಮಾನ್ವಿಯಲ್ಲಿ ಆಮದು ಆಮದು ಅಭ್ಯರ್ಥಿ ಬಿ.ವಿ ನಾಯಕ್ಗೆ ಟಿಕೆಟ್ ಕೊಟ್ಟು ಫೈಟ್ಗೆ ಬಿಜೆಪಿ ಸಜ್ಜಾಗಿದೆ. ನಾಮಪತ್ರಕ್ಕೆ ಕೊನೆದಿನಕ್ಕೂ ಮುನ್ನವೇ ಅಭ್ಯರ್ಥಿ ಫೈನಲ್ ಮಾಡಿದೆ. ತೀವ್ರ ಕುತೂಹಲ ಸೃಷ್ಟಿಸಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೊಷಿಸಿದೆ.. ಜೊತೆಗೆ ರಾಯಚೂರಿನ ಮಾನ್ವಿ ಕ್ಷೇತ್ರಕ್ಕೂ ಅಭ್ಯರ್ಥಿ ಪ್ರಕಟಿಸಿದೆ. ಎಲ್ಲಾ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿ ಚುನಾವಣಾ ಯುದ್ದಕ್ಕೆ ಸೇನೆ ಸಜ್ಜುಗೊಳಿಸಿದೆ.
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಕ್ಷೇತ್ರ ಸಾಕಷ್ಟು ಕಗ್ಗಂಟಾಗಿತ್ತು. ಬಿಜೆಪಿ ಭದ್ರಕೋಟೆಯ ಟಿಕೆಟ್ಗಾಗಿ ನಡೆದ ಕಸರತ್ತು ತೀವ್ರ ಚರ್ಚೆ ಹುಟ್ಟುಹಾಕಿತ್ತು.. ಫೈನಲಿ ನಿನ್ನೆ ರಾತ್ರಿ ಶಿವಮೊಗ್ಗದಲ್ಲಿ ಕಮಲ ಮೊಗ್ಗು ಅರಳಿಸಲು ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಚನ್ನಬಸಪ್ಪ ಎಂಬುವವರಿಗೆ ಟಿಕೆಟ್ ನೀಡಿದೆ. ಇತ್ತ, ಮಾನ್ವಿ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಆಮದು ಮಾಡಿಕೊಂಡ ಬಿ.ವಿ ನಾಯಕ್ಗೆ ಟಿಕೆಟ್ ನೀಡಿದೆ.
ಈಗಾಗಲೇ ಚುನಾವಣೆ ನಿವೃತ್ತಿ ಘೋಷಿಸಿರುವ ಮಾಜಿ ಡಿಸಿಎಂ ಈಶ್ವರಪ್ಪ, ಶಿವಮೊಗ್ಗ ಕ್ಷೇತ್ರದಲ್ಲಿ ಪುತ್ರ ಕಾಂತೇಶ್ರನ್ನ ತಮ್ಮ ಉತ್ತರಾಧಿಕಾರಿ ಆಗಿಸುವ ಆಸೆಯಲ್ಲಿದ್ದರು. ಈ ಆಸೆಗೆ ಕಾರಣ, ಬಿಎಸ್ವೈ ಪುತ್ರ ವಿಜಯೇಂದ್ರ, ಕಟ್ಟಾ ಸುಬ್ರಹ್ಮಣ್ಯ ಪುತ್ರ ಜಗದೀಶ್, ಆನಂದ್ ಸಿಂಗ್ ಪುತ್ರ ಸಿದ್ದಾರ್ಥಗೆ ಬಿಜೆಪಿ ಮಣೆ ಹಾಕಿತ್ತು. ಅದೇ ರೀತಿಯ ನಿರೀಕ್ಷೆಯಲ್ಲಿದ್ದ ಈಶ್ವರಪ್ಪಗೆ ಹೈಕಮಾಂಡ್ ಶಾಕ್ ನೀಡಿದೆ. ಆದ್ರೆ, ಇದೀಗ ಕಾಂತೇಶ್ ಬದಲಿಗೆ ಈಶ್ವರಪ್ಪ ಅಪ್ತನಿಗೆ ಟಿಕೆಟ್ ನೀಡಿದೆ.
ರಾತ್ರಿ ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಶಿವಮೊಗ್ಗ ನಗರಕ್ಕೆ ಪಕ್ಷದ ಅಭ್ಯರ್ಥಿಯಾಗಿ ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪ ಹೆಸರು ಅಂತಿಮಗೊಳಿಸಿದೆ. ಲಿಂಗಾಯತ ಸಮುದಾಯದ ಚನ್ನಬಸಪ್ಪ, ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕಟ್ಟಾ ಬೆಂಬಲಿಗ, ಮಾನಸಪುತ್ರ ಎಂದೇ ಪರಿಚಿತರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿ ಸಂಘಟನೆ ಜವಾಬ್ದಾರಿ ನಿರ್ವಹಿಸಿದ ಚನ್ನಬಸಪ್ಪ, ಶಿವಮೊಗ್ಗದ ಮಟ್ಟಿಗೆ ಬಿಜೆಪಿಯ ಹಿಂದುತ್ವದ ಆಶಯಗಳ ಅನುಷ್ಠಾನದ ಪಡೆಯ ಪ್ರಮುಖ ಸೇನಾನಿ. ಸಂಘದ ಕಟ್ಟಾಳು ಆಗಿರುವ ಚನ್ನಬಸಪ್ಪಗೆ ಟಿಕೆಟ್ ಸಿಗುವಲ್ಲಿ ಇದು ನೆರವಾಗಿದೆ .
ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಂಸದ ಬಿ.ವಿ ನಾಯಕ್ರನ್ನ ಸೆಳೆದು ಬಿಜೆಪಿ ಟಿಕೆಟ್ ನೀಡಿದೆ. ಮೊನ್ನೆ ಅಷ್ಟೇ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದ ಬಿವಿ ನಾಯಕ್, ಬಿಜೆಪಿ ಟಿಕೆಟ್ ಪಡೆದು ಸೇಡು ತೀರಿಸುವ ತವಕದಲ್ಲಿದ್ದಾರೆ.