ಸಮಗ್ರ ನ್ಯೂಸ್: ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದ್ದು, ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಚುನಾವಣಾ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಸ್ವಾಮೀಜಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತ ವಿವಿಧ ಸಮುದಾಯಗಳ ಒಂಭತ್ತು ಜನರ ಬೆಂಬಲ ದೊರಕಿದ್ದು, ನಾಳೆಯೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತೇರದಾಳ ಕ್ಷೇತ್ರದಲ್ಲಿ ನೇಕಾರರ ಮತಗಳು ನಿರ್ಣಾಯಕರಾಗಿರುವ ಹಿನ್ನೆಲೆ. ಹೀಗಾಗಿ ಈ ಬಾರಿ ನೇಕಾರರಿಗೆ ಟಿಕೆಟ್ ಕೊಡುವಂತೆ ಬಿಜೆಪಿಯನ್ನು ಒತ್ತಾಯಿಸಲಾಗಿತ್ತು. ಆದರೆ ಬಿಜೆಪಿ ಹಾಲಿ ಶಾಸಕ ಸಿದ್ದು ಸವದಿಗೆ ಟಿಕೆಟ್ ಘೋಷಣೆ ಮಾಡಿದೆ. ಇತ್ತ ಕಾಂಗ್ರೆಸ್ ಪಕ್ಷ ಕೂಡ ನೇಕಾರ ಮಹಿಳೆ ಮಾಜಿ ಸಚಿವೆ ಉಮಾಶ್ರೀ ಬಿಟ್ಟು ಸಿದ್ದು ಕೊಣ್ಣೂರಗೆ ಟಿಕೆಟ್ ನೀಡಿದೆ.
ಪ್ರಮುಖ ಎರಡೂ ಪಕ್ಷಗಳು ನೇಕಾರರಿಗೆ ಟಿಕೆಟ್ ನೀಡದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಕ್ಷೇತ್ರದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಅಸಮಾಧಾನಗೊಂಡ ನಾಯಕರು ನೇಕಾರ ಸ್ವಾಮೀಜಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದರು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿವೆ.
ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿಗೆ ಬಿಜೆಪಿ ಹಾಗೂ ಕಾಂಗ್ರೆಸ್ನ ಟಿಕೆಟ್ ವಂಚನ ನಾಯಕರು ತೆರೆಮರೆಯಲ್ಲಿ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. 2008ರಲ್ಲಿ ಉದಯವಾದ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ಎರಡು ಸಲ ಸಿದ್ದು ಸವದಿ ಹಾಗೂ ಒಂದು ಸಲ ಉಮಾಶ್ರೀ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.