ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಈ ಬಾರಿ ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಹೈಮಾಂಡ್ ಅಂತಿಮ ಮಾಡಿದೆ. ಮೂರನೇ ಪಟ್ಟಿ ಬಿಡುಗಡೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದ್ದು, ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಈ ಬಾರಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದಾರೆ.
ರಾಮದಾಸ್ ಅವರ ಕಾರ್ಯವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರೂ ಕೂಡ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹೈಮಾಂಡ್ ಅವಕಾಶ ನೀಡಿಲ್ಲ ಬದಲಿಗೆ, ಆರ್‌ಎಸ್‌ಎಸ್ ಮುಖಂಡ ಬಿ.ಎಲ್. ಸಂತೋಷ್ ಆಪ್ತ ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ್ ಅವರಿಗೆ ಬಿಜೆಪಿ ಮಣೆ ಹಾಕಿದೆ.
ಕೆಆರ್ ಕ್ಷೇತ್ರ ಕಳೆದ 30 ವರ್ಷದಿಂದ ಬಿಜೆಪಿ ಭದ್ರಕೋಟೆ. ಬಹುಪಾಲು ಇಲ್ಲಿನ ಜನ ಬಿಜೆಪಿಗೆ ಜೈ ಅಂದಿದ್ದಾರೆ . ಆದರೆ, ಹಾಲಿ ಶಾಸಕ ರಾಮದಾಸ್ ಅವರಿಗೆ ಟಿಕೆಟ್ ನೀಡದಂತೆ ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಹೈ ಕಮಾಂಡ್ ಗೆ ಮನವಿ ಮಾಡಿದ್ದರು. ಈ ಕಾರಣದಿಂದಲೇ ಸಾಕಷ್ಟು ಅಳೆದು ತೂಗಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಈಗಾಗಲೇ ಶಾಸಕ ರಾಮದಾಸ್ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದಿದೆ ಎನ್ನಲಾಗಿದೆ.