ಸಮಗ್ರ ನ್ಯೂಸ್: ಗುಂಪಿನಿಂದ ಬೇರ್ಪಟ್ಟ ಆನೆಮರಿ ತನ್ನ ಹಿಂಡು ಸೇರಲಾಗದೆ ಅಲೆದಾಡುತ್ತಿರುವ ಘಟನೆ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ತೋಟದ ಕೆರೆಯೊಂದಕ್ಕೆ ಕಾಡಾನೆಗಳ ಹಿಂಡೊಂದು ಅಚಾನಕ್ಕಾಗಿ ಬಿದ್ದಿತ್ತು.
ಈ ಆನೆಗಳ ಹಿಂಡಿನಲ್ಲಿ ನಾಲ್ಕು ಆನೆಗಳಿದ್ದು, ಎರಡು ದೊಡ್ಡ ಆನೆ ಹಾಗೂ ಸುಮಾರು ಒಂದು ವರ್ಷ ಪ್ರಾಯದ ಆನೆ ಹಾಗೂ ಮೂರು ತಿಂಗಳ ಮರಿ ಕೂಡಾ ಸೇರಿದ್ದವು. ಯಶಸ್ವಿ ಕಾರ್ಯಾಚರಣೆ ಬಳಿಕ ಎರಡು ಆನೆಗಳು ಕೆರೆಯಿಂದ ಮೇಲೇರಿ ಬಂದಿದ್ದವು.
ಆದರೆ ಮರಿಯಾನೆ ಮೇಲೆ ಬರಲಾಗದ ಕಾರಣ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗ ಕಟ್ಟಿ ಎಳೆದು, ಹಿಂದಿನಿಂದ ದೂಡಿ ಕೆರೆಯಿಂದ ಮೇಲೆತ್ತಿದ್ದರು. ಬಳಿಕ ಆನೆ ಮರಿ ತನ್ನ ಹಿಂಡಿನ ಬಳಿ ಸೇರಿತಾದರೂ ತಾಯಿ ಆನೆ ಮರಿಯನ್ನು ಜೊತೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದೆ. ಗುರುವಾರ ರಾತ್ರಿ ಆನೆಮರಿ ಏಕಾಂಗಿಯಾಗಿ ಘೀಳಿಡುತ್ತಾ ಆಕ್ರಂದನ ಮಾಡಿದರೂ ಗುಂಪಿನ ಆನೆಗಳು ಕರೆದುಕೊಳ್ಳಲಿಲ್ಲ.
ಈ ನಡುವೆ ಊರಿನಲ್ಲಿ ಮನುಷ್ಯ ಮುಟ್ಟಿದ ಕಾರಣದಿಂದ ಆನೆ ಮರಿಯನ್ನು ಸೇರಿಸಿಕೊಳ್ಳಲಿಲ್ಲ ಎಂದು ಸುದ್ದಿಯಾಯಿತು. ಈ ಬಗ್ಗೆ ಸುಳ್ಯ ವಲಯ ಅರಣ್ಯಾಧಿಕಾರಿ ಸ್ಪಷ್ಟನೆ ನೀಡಿದ್ದು, ಅಂತಹ ಸಂಗತಿಗಳು ನಿರಾಧಾರ. ಕೆಲವೊಮ್ಮೆ ಆತಂಕಕ್ಕೆ ಒಳಗಾಗಿ ಆನೆಗಳು ಮರಿಯನ್ನು ಸೇರಿಸಿಕೊಳ್ಳದೇ ಇರಬಹುದು. ಅಥವಾ ತಾಯಿ ಆನೆಗೆ ಕೆಚ್ಚಲಿನ ಭಾಗದಲ್ಲಿ ಗಾಯವಾಗಿದ್ದರೆ ಕೂಡಾ ಹೀಗಾಗುತ್ತದೆ ಎಂದಿದ್ದಾರೆ. ಆದರೆ ಆನೆಮರಿ ಮಾತ್ರ ಮತ್ತೆ ಮನುಷ್ಯರ ಬಳಿ ಬರುತ್ತಿದ್ದು, ತನ್ನ ಅಮ್ಮನ ಕಾಣದೇ ಮರುಗುತ್ತಿದೆ.
ಆನೆಗಳ ಹಿಂಡು ಸಮೀಪದ ಬೆಳ್ಳಪ್ಪಾರೆ ಎಂಬಲ್ಲಿ ಇದ್ದರೂ ತನ್ನ ಮರಿಯನ್ನು ಕರೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ಒಂದೆರಡು ದಿನಗಳ ಬಳಿಕ ಆನೆಮರಿಯನ್ನು ದುಬಾರೆ ಕ್ಯಾಂಪ್ ಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಸದ್ಯ ಆನೆಮರಿಯನ್ನು ಅದರ ಗುಂಪಿಗೆ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ. ತಾಯಿಯಿಂದ ಬೇರ್ಪಟ್ಟ ಮರಿಯಾನೆಯ ರೋಧನ ನೋಡುವವರ ಕಣ್ಣಂಚು ಒದ್ದೆ ಮಾಡುತ್ತಿದೆ.