ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಮೂರು ದಶಕಗಳಿಂದ ನೀಡಲಾಗುತ್ತಿದ್ದ ಶೇ. 4 ಮೀಸಲು ವ್ಯವಸ್ಥೆ ರದ್ದು ಮಾಡಿ, ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ.2ರಷ್ಟು ಹಂಚಿಕೆ ಮಾಡಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಈ ತೀರ್ಮಾನ ದೋಷಪೂರಿತವಾಗಿದೆ ಮತ್ತು ಸೂಕ್ತವಾದ ಕ್ರಮ ಅಲ್ಲ ಎಂದೂ ಹೇಳಿದೆ. ಆದರೆ, ಕರ್ನಾಟಕ ಸರಕಾರದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪೂರಕವಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಮಾ. 30ರಂದು ಮೀಸಲು ಪ್ರಮಾಣದಲ್ಲಿ ಬದಲಾವಣೆ ಮಾಡಿತ್ತು. ಈ ಸಂದರ್ಭದಲ್ಲಿ ಒಬಿಸಿ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ. 4 ಮೀಸಲು ರದ್ದು ಮಾಡಲಾಗಿತ್ತು.
ಈ ತೀರ್ಮಾನ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ನಲ್ಲಿ ಹುಬ್ಬಳ್ಳಿಯ ಅಂಜುಮನ್ ಸಂಸ್ಥೆ, ಬೆಂಗಳೂರಿನ ಸೆಂಟ್ರಲ್ ಮುಸ್ಲಿಂ ಎಸೋಸಿಯೇಷನ್, ವಿಜಯನಗರ (ಹೊಸಪೇಟೆ) ನಿವಾಸಿ ಗುಲಾಮ್ ರಸೂಲ್ ಎಂಬುವರು ರಾಜ್ಯ ಸರಕಾರ ನಿರ್ಧಾರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ ಕೆ.ಎಂ.ಜೋಸೆಫ್ ಮತ್ತು ನ್ಯಾ| ಬಿ.ವಿ. ನಾಗರತ್ನಾ ಅವರನ್ನೊಳಗೊಂಡ ನ್ಯಾಯಪೀಠ ಕರ್ನಾ ಟ ಕ ಸರಕಾರದ ನಿರ್ಧಾರದ ವಿರುದ್ಧ ಆಕ್ಷೇಪ ಮಾಡಿತು. ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ. 4 ಮೀಸಲು ವ್ಯವಸ್ಥೆ ರದ್ದು ಮಾಡಿರುವುದು ಮೇಲ್ನೋಟಕ್ಕೆ ತಪ್ಪು ಗ್ರಹಿಕೆಯ ನಿರ್ಧಾರ ಎಂದು ಸಾಬೀತಾಗುತ್ತದೆ. ಜತೆಗೆ ಈ ಮೀಸ ಲಾ ತಿ ಯ ನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಶೇ. 2ರಷ್ಟು ಹಂಚಿಕೆ ಮಾಡಿ ರು ವುದು ತಪ್ಪು ಮತ್ತು ಆ ನಿರ್ಧಾರಕ್ಕೆ ಸೂಕ್ತ ಆಧಾರಗಳಿಲ್ಲ’ ಎಂದು ಹೇಳಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಮತ್ತು ಗೋಪಾಲ ಶಂಕರನಾರಾಯಣನ್ “ಸಮುದಾಯಕ್ಕೆ ಸದ್ಯ ಇರುವ ವ್ಯವಸ್ಥೆ ರದ್ದುಪಡಿಸುವ ಬಗ್ಗೆ ಯಾವುದೇ ಸಮರ್ಥ ಅಧ್ಯಯನ ನಡೆಸಲಾಗಿಲ್ಲ’ ಎಂದು ವಾದಿಸಿದರು.
ಕರ್ನಾಟಕ ಸರಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎ. 18ರ ವರೆಗೆ ಮೀಸಲು ರದ್ದು ನಿರ್ಧಾರ ಜಾರಿ ಮಾಡುವುದಿಲ್ಲ. ಈ ಬಗ್ಗೆ ಮಾಹಿತಿ ನೀಡಲು ಹೆಚ್ಚಿನ ಕಾಲಾವಕಾಶ ಕೋರಿದರು. ಇದೇ ವೇಳೆ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಪರ ವಾದಿಸಿದ ನ್ಯಾಯವಾದಿ ಮುಕುಲ್ ರೋಹಟಗಿ “ನಮ್ಮ ಕಕ್ಷಿದಾರರ ವಾದ ಆಲಿಸದೆ ಯಾವುದೇ ಮಧ್ಯಂತರ ಆದೇಶ ನೀಡಬಾರದು’ ಎಂದು ಪ್ರಾರ್ಥಿಸಿದರು. ಇದಾದ ಬಳಿಕ ಎ. 18ಕ್ಕೆ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿತು.
ಇದೇ ವೇಳೆ, ಮೀಸಲು ತೀರ್ಮಾನ ರದ್ದು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ| ಡಿ.ವೈ. ಚಂದ್ರಚೂಡ್ ಮತ್ತು ನ್ಯಾ| ಪಿ.ಎಸ್. ನರಸಿಂಹ, ನ್ಯಾ| ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಗೆ ಸ್ವೀಕೃತಗೊಂಡಿದೆ. ನ್ಯಾಯವಾದಿ ಕಪಿಲ್ ಸಿಬಲ್ ವಾದ ಮಂಡಿಸಿ ಅರ್ಜಿಯಲ್ಲಿ ಇದ್ದ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದೆ ಎಂದು ಅರಿಕೆ ಮಾಡಿದರು.