ಸಮಗ್ರ ನ್ಯೂಸ್: ಕರ್ನಾಟಕ ಬಹುತೇಕ ಎಲ್ಲ ಕಡೆ ಸುರಿದು ಕೊಂಚ ಬ್ರೇಕ್ ನೀಡಿದ್ದ ಪೂರ್ವ ಮುಂಗಾರು ಮಳೆ ಇದೇ ಏಪ್ರಿಲ್ 15ರಿಂದ ಮತ್ತೆ ಅಬ್ಬರ ಆರಂಭಿಸುವ ಮುನ್ಸೂಚನೆ ನೀಡಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ವರದಿ ತಿಳಿಸಿದೆ.
ಏಪ್ರಿಲ್ 15ರಿಂದ ಮೂರು ದಿನ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಭಾಗದಲ್ಲಿ ವ್ಯಾಪಕವಾಗಿ ಗುಡುಗು ಮಿಂಚು ಸಹಿತ ಮಳೆ ಸುರಿಯಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಲಿದೆ. ಅದೇ ರೀತಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಗದಗ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜೋರು ಮಳೆ ಆಗಲಿದೆ.
ಇನ್ನೂ ದಕ್ಷಿಣ ಒಳನಾಡಿನ ಭಾಗದ ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಮೈಸೂರು, ದಾವಣಗೆರೆ, ಚಿತ್ರದುರ್ಗದಲ್ಲಿ ಅಧಿಕ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಒಟ್ಟು ಏಪ್ರಿಲ್ 15ರಿಂದ ಸುಮಾರು ಮೂರು ದಿನಗಳ ಕಾಲ ಮಳೆಯ ವಾತಾವರಣ ಕಂಡು ಬರುವ ಸಾಧ್ಯತೆ ಇದೆ.
ಕಳೆದ 24 ಗಂಟೆಯಲ್ಲಿ ಉತ್ತರ ಕರ್ನಾಟಕದ ಕೊಪ್ಪಳ್ಳ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಈ ಮೂರು ಜಿಲ್ಲೆ ಹೊರತುಪಡಿಸಿದರೆ ವಿಜಯಪುರ, ಗದಗ, ಹಾವೇರಿ, ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.
ಇನ್ನೂ ಕಾರವಾರ, ಧಾರವಾಡ, ಚಿತ್ರದುರ್ಗ, ಮಂಡ್ಯ ಹಾಗೂ ಶಿವಮೊಗ್ಗದಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. ರಾಜ್ಯ ಕನಿಷ್ಠ ಉಷ್ಣಾಂಶ ಚಿಕ್ಕಮಗಳೂರಿನಲ್ಲಿ 12.8 ಡಿಗ್ರಿ ಸೆಲ್ಸಿಯಸ್ ಮತ್ತು ಮಡಿಕೇರಿ ಹಾಗೂ ಚಿಂತಾಮಣಿಯಲ್ಲಿ ತಲಾ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.