ಸಮಗ್ರ ನ್ಯೂಸ್: ಬಂಡೀಪುರ ಸಫಾರಿ ಮುಗಿಸಿಕೊಂಡು ನೆರೆಯ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿರುವ ಕಾವಾಡಿ ದಂಪತಿ, ಬೊಮ್ಮ-ಬೆಳ್ಳಿ ಅವರೊಂದಿಗೆ ಆತ್ಮೀಯವಾಗಿ ಬೆರೆತರು.
ಆನೆ ಪಾಲಕರಾದ ಕಿರುಮಾರನ್, ಕುಳ್ಳನ್ ಮತ್ತು ದೇವನ್ ಎಂಬುವವರ ಜೊತೆಗೆ ಮಾತನಾಡಿ, ಆನೆಗಳನ್ನು ಪಾಲನೆ ಮಾಡುವ ಬಗ್ಗೆ ಮಾಹಿತಿ ಪಡೆದರು.
ಬಳಿಕ, ಈ ಹಿಂದೆ ತೆಪ್ಪಕಾಡು ಭಾಗದಲ್ಲಿ ಹುಲಿಯನ್ನು ಸೆರೆ ಹಿಡಿದ ಸಿಬ್ಬಂದಿ ಜೊತೆ ಮಾತನಾಡಿ, ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕೈಯನ್ನೂ ಕೈಕುಲುಕಿದರು.
ನಂತರ ಬೆಳ್ಳಿ -ಬೊಮ್ಮ ಕಾವಾಡಿ ದಂಪತಿಯನ್ನು ಮಾತನಾಡಿಸಿದರು. ಆನೆ ಮರಿಗಳನ್ನು ಸಲಹುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ‘ದೆಹಲಿಗೆ ಬರುವಂತೆ ಹೇಳಿದ್ದರೂ ಯಾಕೆ ಬರಲಿಲ್ಲ’ ಎಂದೂ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.
ಸಾಕ್ಷ್ಯಚಿತ್ರದಲ್ಲಿ ಬರುವ ರಘು ಮತ್ತು ಅಮ್ಮು ಹೆಸರಿನ ಆನೆ ಮರಿಗಳಿಗೆ ಕಬ್ಬು ಕೊಟ್ಟು ಮೋದಿ ಸಂತಸ ಪಟ್ಟರು. 11.27ಕ್ಕೆ ಮಸಣಿಗುಡಿಯಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಿಂದ ಮೈಸೂರಿಗೆ ತೆರಳಿದರು.